
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮೀಸ್ ಹಂತಕ್ಕೇರುವ ಆಫ್ಘಾನಿಸ್ತಾನ ಕನಸಿಗೆ ಮಳೆ ಆಘಾತ ನೀಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಇಂದಿನ Do or Die ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಹೌದು.. ಶುಕ್ರವಾರ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಟೇಬಲ್ ಟಾಪರ್ ಆಗಿರುವ ಆಸ್ಟ್ರೇಲಿಯಾ ಅರ್ಹವಾಗಿಯೇ ಸೆಮೀಸ್ ಗೆ ಅರ್ಹತೆ ಪಡೆದಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ನಿಗಧಿತ 50 ಓವರ್ ನಲ್ಲಿ 273 ರನ್ ಪೇರಿಸಿ ಆಲೌಟ್ ಆಯಿತು.
273 ರನ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಸಂಭಾವ್ಯ ಮಳೆಯ ಅಪಾಯವನ್ನು ಅರಿತೇ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೇವಲ 12.5 ಓವರ್ ಗೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 109 ಪೇರಿಸಿತು. ಆಸಿಸ್ ಪರ ಮ್ಯಾಥ್ಯೂ ಶಾರ್ಟ್ 20 ರನ್ ಗಳಿಸಿ ಔಟಾದರೆ, ಟ್ರಾವಿಸ್ ಹೆಡ್ ಅಜೇಯ 59ರನ್ ಮತ್ತು ನಾಯಕ ಸ್ಮಿತ್ ಅಜೇಯ 19 ರನ್ ಗಳಿಸಿದ್ದರು. ಈ ಹಂತದಲ್ಲಿ ಮಳೆ ಬಂದು ಆಟಕ್ಕೆ ಅಡ್ಡಿಯಾಯಿತು.
ಮೈದಾನ ಒಣಗಿಸುವಲ್ಲಿ ಸಿಬ್ಬಂದಿ ವಿಫಲ
ಮಳೆ ಬಂದು ನಿಂತು ಸಾಕಷ್ಟು ಸಮಯ ಕಾದರೂ ಮೈದಾನದಲ್ಲಿದ್ದ ತೇವಾಂಶವನ್ನು ಒಣಗಿಸುವಲ್ಲಿ ಗಡಾಫಿ ಕ್ರೀಡಾಂಗಣದ ಸಿಬ್ಬಂದಿ ವಿಫಲವಾದರು. ಸತತ ಪ್ರಯತ್ನಗಳ ಹೊರತಾಗಿಯೂ ಭಾರಿ ಮಳೆ ಸುರಿದಿದ್ದರಿಂದ ಮೈದಾನದಲ್ಲಿ ಯಥೇಚ್ಛ ನೀರು ನಿಂತಿತ್ತು. ಹೀಗಾಗಿ ನಿಗಧಿತ ಸಮಯದೊಳಗೆ ಮೈದಾನದಿಂದ ನೀರು ಹೊರ ಚೆಲ್ಲುವಲ್ಲಿ ಸಿಬ್ಬಂದಿ ವಿಫಲರಾದರು. ಅಂತಿಮವಾಗಿ ಅಂಪೈರ್ ಗಳು ಪಂದ್ಯವನ್ನು ರದ್ದು ಮಾಡಿದರು.
ಅಂಕ ಹಂಚಿಕೆ
ಪಂದ್ಯ ರದ್ದಾಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದ್ದು, ಆ ಮೂಲಕ 3 ಪಂದ್ಯಗಳನ್ನಾಡಿ ಒಂದರಲ್ಲಿ ಜಯ ಗಳಿಸಿ 4 ಅಂಕಗಳಿಸಿರುವ ಆಸ್ಚ್ರೇಲಿಯಾ ಟೇಬಲ್ ಟಾಪರ್ ಆಗಿ ಸೆಮೀಸ್ ಗೆ ಅರ್ಹತೆ ಗಿಟ್ಟಿಸಿದೆ. ಬಿ ಗುಂಪಿನಿಂದ ಸೆಮೀಸ್ ಅರ್ಹತೆ ಗಿಟ್ಟಿಸಲು ಇದೀಗ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಇದ್ದು, ಅಫ್ಘಾನಿಸ್ತಾನಕ್ಕಿಂತ ದಕ್ಷಿಣ ಆಫ್ರಿಕಾಗೆ ಸೆಮೀಸ್ ಗೇರುವ ಅವಕಾಶ ಅಧಿಕವಾಗಿದೆ.
Advertisement