
ಮುಂಬೈ: ತಮ್ಮ ಬಳಿ ತರಬೇತಿ ಪಡೆಯುತ್ತಿದ್ದ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೇವಲ 12 ದಿನಗಳಲ್ಲೇ ತಮ್ಮ ಕ್ಯಾಂಪ್ ಬಿಟ್ಟು ಹೋಗಿದ್ದು, ಈ ಬಗ್ಗೆ ಇದೇ ಮೊದಲ ಬಾರಿಗೆ ಯೋಗರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾದ ನಂತರ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತನ್ನ ಬಳಿ ಕೋಚಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇಕೆ ಎಂಬುದಕ್ಕೆ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ.
‘ಅನ್ಫಿಲ್ಟರ್ಡ್ ಬೈ ಸಮದೀಶ್’ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯೋಗರಾಜ್, 'ಸಚಿನ್ ಅವರ ಮಗ ಅರ್ಜುನ್ ನನ್ನಲ್ಲಿ 12 ದಿನಗಳ ಕಾಲ ತರಬೇತಿ ಪಡೆದ. ಅವರು ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಗಳಿಸಿದ. ಐಪಿಎಲ್‌ನಲ್ಲಿ ಮುಂಬೈ ತಂಡಕ್ಕೂ ಆಯ್ಕೆಯಾದ. ಆದರೆ, ಬೇರೆ ಟೀಮ್ ಕೋಚ್ ಜೊತೆಗೆ ಅರ್ಜುನ್ ಹೆಸರು ತಳುಕು ಹಾಕಿಕೊಳ್ಳುತ್ತದೆ ಎನ್ನುವ ಕಾರಣಕ್ಕೆ ನನ್ನಿಂದ ಕೋಚಿಂಗ್ ಪಡೆಯುವುದನ್ನು ನಿಲ್ಲಿಸಿದ. ಈ ಹಠಾತ್ ನಿರ್ಧಾರಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಅರ್ಜುನ್ ನನ್ನ ಬಳಿ ಕೋಚಿಂಗ್ ಪಡೆದರೆ ಜನರು ಏನು ಹೇಳುತ್ತಾರೇ ಎಂಬ ಭಯದಿಂದ ಹಿಂದೆ ಸರಿದರಬಹುದು ಎಂದು ಯೋಗರಾಜ್ ಹೇಳಿದ್ದಾರೆ.
ಅಂತೆಯೇ ನಾನು ಯುವಿಗೆ ಹೇಳಿದ್ದೆ.. ಸಚಿನ್ ಗೆ ಹೇಳು.. ಅರ್ಜುನ್ ನನ್ನು ನನ್ನ ಬಳಿ ಒಂದು ವರ್ಷ ಬಿಡಲಿ.. ಆ ಮೇಲೆ ಏನಾಗುತ್ತದೆ ಎಂದು ನೋಡೋಣ" ಎಂದು ಹೇಳಿದ್ದೆ. ಆದರೆ 12 ದಿನಕ್ಕೆ ಆತ ತರಬೇತಿ ಬಿಟ್ಟಿದ್ದ ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
2022ರಲ್ಲಿ ದೇಶೀಯ ಕ್ರಿಕೆಟ್ಗೂ ಮುನ್ನ ಸಚಿನ್, ಯುವಿ ಮನವಿ ಮೇರೆಗೆ ಅರ್ಜುನ್ ತರಬೇತಿಗೆ ಯೋಗರಾಜ್ರನ್ನು ಸಂಪರ್ಕಿಸಿದ್ದರು. ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಯೋಗರಾಜ್ ಮಾರ್ಗದರ್ಶನದಲ್ಲಿ ಅರ್ಜುನ್ ತರಬೇತಿ ಪಡೆದಿದ್ದರು. ಯುವರಾಜ್ ಸಿಂಗ್ ಅವರ ತಂದೆಯ ಜೊತೆಗೆ 12 ದಿನಗಳ ಕಾಲ ತರಬೇತಿ ಪಡೆದಿದ್ದ ಅರ್ಜುನ್, ರಣಜಿ ಟ್ರೋಫಿಯಲ್ಲಿ ಗೋವಾ ಪರ ಶತಕ ಬಾರಿಸಿದ್ದರು.
ಅದೇ ವರ್ಷ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೂಲ ಬೆಲೆ 20 ಲಕ್ಷಕ್ಕೆ ಬಿಕರಿಯಾಗಿದ್ದರು. ಆದರೆ ಐಪಿಎಲ್‌ನಲ್ಲಿ ಮುಂಬೈ ತಂಡವನ್ನು ಸೇರಿದ ನಂತರ ಅರ್ಜುನ್ ತರಬೇತಿ ಪಡೆಯಲು ಯೋಗರಾಜ್ ಬಳಿಗೆ ಹೋಗಲಿಲ್ಲ. ಆರಂಭಿಕ ಯಶಸ್ಸಿನ ಹೊರತಾಗಿಯೂ ತನ್ನನ್ನು ಅರ್ಜುನ್ ತೆಗೆದು ಹಾಕಿದ್ದೇಕೆ ಎಂಬ ಪ್ರಶ್ನೆಗೆ ಯೋಗರಾಜ್ ಉತ್ತರ ನೀಡಿದ್ದಾರೆ.
ಇನ್ನು ಅರ್ಜುನ್ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 37 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 3 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಮುಂಬೈ ಪಾಲಾಗಿರುವ ಅರ್ಜುನ್, ಮೂಲ ಬೆಲೆ 30 ಲಕ್ಷಕ್ಕೆ ಸೇಲ್ ಆದರು. ಸಚಿನ್ ಪುತ್ರ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಿದ್ದರು.
Advertisement