
ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ತಂಡವನ್ನು 36 ರನ್ ಗಳಿಂದ ಮಣಿಸಿ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕರ್ನಾಟಕ ನೀಡಿದ 349 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ವಿದರ್ಭ ತಂಡ 48.2 ನಲ್ಲಿ 312 ರನ್ ಗಳಿಗೆ ಆಲೌಟ್ ಆಗುವ ಮೂಲಕ 36 ರನ್ ಗಳಿಂದ ವಿರೋಚಿತ ಸೋಲು ಕಂಡಿದೆ. ವಿದರ್ಭ ಪರ ಧ್ರುವ್ ಶೋರೆ ಅದ್ಭುತ ಬ್ಯಾಟಿಂಗ್ ಮಾಡಿ 110 ರನ್ ಗಳ ಕೊಡುಗೆ ನೀಡಿದರು. ಇನ್ನು ಹರ್ಷ ದುಬೇ ಸ್ಫೋಟಕ ಬ್ಯಾಟಿಂಗ್ ಮಾಡಿ 30 ಎಸೆತಗಳಲ್ಲಿ 63 ರನ್ ಗಳಿಸಿ ತಂಡವನ್ನು ಗೆಲುವಿನ ದಡೆ ಸೇರಿಸಲು ಯತ್ನಿಸಿದರು. ಆದರೆ ಇತರ ಬ್ಯಾಟ್ಸ್ ಮನ್ ಗಳು ಸಾಥ್ ನೀಡದಿದ್ದರಿಂದ ತಂಡ 312 ರನ್ ಗಳಿಗೆ ಅಂತ್ಯ ಕಂಡಿತು. ಕರ್ನಾಟಕ ಪರ ವಾಸುಕಿ ಕೌಶಿಕ್, ಪ್ರಸಿದ್ಧ್ ಕೃಷ್ಣ ಮತ್ತು ಅಭಿಲಾಷ್ ಶೆಟ್ಟಿ ತಲಾ 3 ವಿಕೆಟ್ ಪಡೆದರೆ ಹಾರ್ದಿಕ್ ರಾಜ್ 1 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡಕ್ಕೆ ರವಿಚಂದ್ರನ್ ಸ್ಮರಣ್ 101 ರನ್ ಗಳ ಕೊಡುಗೆ ನೀಡಿದರು. ನಂತರ ಬಂದ ಕೃಷ್ಣನ್ ಶ್ರೀಜಿತ್ 78 ಮತ್ತು ಅಭಿನವ್ ಮನೋಹರ್ 79 ರನ್ ಸಿಡಿಸಿದ್ದು ತಂಡ 348 ರನ್ ಬೃಹತ್ ಮೊತ್ತ ಕಲೆ ಹಾಕಲು ನೆರವಾಯಿತು. ವಿದರ್ಭ ಪರ ದರ್ಶನ್ ನಲ್ಕೊಂಡೆ ಮತ್ತು ನಚಿಕೇತ್ ತಲಾ 2 ವಿಕೆಟ್ ಪಡೆದರೆ ಯಶ್ ಠಾಕೂರ್ ಮತ್ತು ಯಶ್ ಕದಮ್ ತಲಾ 1 ವಿಕೆಟ್ ಪಡೆದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಪಾರಮ್ಯ ಮೆರೆದಿದೆ. ಒಟ್ಟು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2013ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ತಂಡ ನಂತರ 2014, 2017 ಮತ್ತು 2019ರಲ್ಲಿ ಟ್ರೋಫಿ ಗೆದ್ದಿತ್ತು.
Advertisement