
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಸುದ್ದಿಯಾಗಿದ್ದಾರೆ. ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರೊಂದಿಗಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವು ವದಂತಿಗಳು ಹುಟ್ಟಿಕೊಂಡಿವೆ. ಜನೈ ಅವರು ತಮ್ಮ 23ನೇ ಹುಟ್ಟುಹಬ್ಬದಂದು Instagram ನಲ್ಲಿ ಸರಣಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಅವರು ಹಂಚಿಕೊಂಡಿರುವ ಫೋಟೊಗಳಲ್ಲಿ ಸಿರಾಜ್ ಜೊತೆಗಿರುವ ಫೋಟೊ ಇದೀಗ ವೈರಲ್ ಆಗಿದೆ.
ಚಿತ್ರದಲ್ಲಿ ಇಬ್ಬರು ನಗುತ್ತಾ, ಆತ್ಮೀಯರಾಗಿರುವುದು ಕಂಡುಬಂದಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ಕೂಡಲೇ ಎಚ್ಚೆತ್ತುಕೊಂಡಿರುವ ಸಿರಾಜ್ ಮತ್ತು ಜನೈ ಸ್ಪಷ್ಟನೆ ನೀಡಿದ್ದಾರೆ. ಸಿರಾಜ್ ಅವರು ಆಕೆ ನನ್ನ ತಂಗಿ ಎಂದು ಕರೆದಿದ್ದರೆ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಜನೈ ಅವರು 'ನನ್ನ ಪ್ರೀತಿಯ ಸಹೋದರ' ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಸಿರಾಜ್ ಸದ್ಯ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ವೈಟ್-ಬಾಲ್ ಸರಣಿ ಮತ್ತು ಮುಂದಿನ ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ತಂಡದಿಂದ ಕೈಬಿಡಲಾಗಿದೆ.
2025ರ ಐಪಿಎಲ್ ಮೆಗಾ ಹರಾಜಿಗೆ ಮೊದಲು ಆರ್‌ಸಿಬಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಬಳಿಕ ಅವರನ್ನು 12.5 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡವು ಖರೀದಿಸಿದೆ. ಅದಾದ ಬಳಿಕ ಅವರು ಆರ್‌ಸಿಬಿ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದರು.
ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಐಸಿಸಿ ಪಂದ್ಯಾವಳಿಗೆ ಲಭ್ಯರಿರುತ್ತಾರೆಯೇ ಎಂಬ ಬಗ್ಗೆ ಸದ್ಯ ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ಸಿರಾಜ್ ಅವರನ್ನು ಚಾಂಪಿಯನ್ಸ್ ಟ್ರೋಫಿಯಿಂದ ಕೈಬಿಟ್ಟಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.
'ನಿಮಗೆ ಬ್ಯಾಕ್‌ಅಪ್ ವೇಗಿ ಅಗತ್ಯವಿದೆ. ಸಿರಾಜ್ ಉತ್ತಮ ಆಯ್ಕೆಯಾಗಿದ್ದರು. ದುಬೈನಲ್ಲಿ ನಾಲ್ಕು ಸ್ಪಿನ್ನರ್‌ಗಳು ತಂಡದಲ್ಲಿ ಆಡುವುದು ಉತ್ತಮವಲ್ಲ. ಬುಮ್ರಾ ಮತ್ತು ಶಮಿ ಗಾಯದಿಂದ ಮರಳಿರುವುದರಿಂದ, ಈಗಲೇ ಅವರು ಲಭ್ಯರಾಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಸಿರಾಜ್ ಅವರನ್ನು ಆಯ್ಕೆ ಮಾಡಬೇಕಿತ್ತು' ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.
Advertisement