
ಬರ್ಮಿಂಗ್ಹ್ಯಾಮ್: ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಧವಾರ ಭಾರತ ತಂಡ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲ ಟೆಸ್ಟ್ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದಿದ್ದ ಇಂಗ್ಲೆಂಡ್ ತಂಡವು ಯಾವುದೇ ಬದಲಾವಣೆ ಮಾಡಿಲ್ಲದೆ ಮೈದಾನಕ್ಕಿಳಿದಿದೆ.
ಭಾರತ ತಂಡವು ಪ್ರಧಾನ ವೇಗಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಅವರ ಬದಲಿಗೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಿದೆ. ಸಾಯಿ ಸುದರ್ಶನ್ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ಆಲ್‌ರೌಂಡರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ ಅವರನ್ನು ಏಕೆ ಕೈಬಿಡಲಾಗಿದೆ ಎಂದು ಕೇಳಿದಾಗ ಭಾರತದ ನಾಯಕ ಶುಭಮನ್ ಗಿಲ್, 'ಅವರ ಕೆಲಸದ ಹೊರೆಯನ್ನು ನಿರ್ವಹಿಸಲು ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದು ಪ್ರಮುಖ ಪಂದ್ಯವಾಗಿದೆ. ಆದರೆ, ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ಇರುವುದರಿಂದ ವಿಕೆಟ್ ಸ್ವಲ್ಪ ಕಷ್ಟವಾಗಿರುತ್ತದೆ ಮತ್ತು ನಾವು ಅವರನ್ನು ಅಲ್ಲಿ ಆಡಿಸುತ್ತೇವೆ ಎಂದು ಭಾವಿಸಿದ್ದೇವೆ' ಎಂದರು.
ಕುಲದೀಪ್ ಯಾದವ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರನ್ನು ಆಡಿಸಲು ಬಯಸಿದ್ದೆವು ಆದರೆ, ಸರಣಿಯ ಮೊದಲ ಪಂದ್ಯದಲ್ಲಿನ ಸೋಲಿನ ನಂತರ ಬ್ಯಾಟಿಂಗ್‌ಗೆ ಆಳವನ್ನು ಸೇರಿಸಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಗಿಲ್ ಹೇಳಿದರು.
ಜೂನ್ 28 ರಂದು ನಿಧನರಾದ ಮಾಜಿ ಇಂಗ್ಲೆಂಡ್, ನಾರ್ಥಾಂಪ್ಟನ್‌ಶೈರ್ ಮತ್ತು ಡರ್ಹ್ಯಾಮ್ ಕ್ರಿಕೆಟಿಗ ವೇಯ್ನ್ ಲಾರ್ಕಿನ್ಸ್ ಅವರ ಸ್ಮರಣಾರ್ಥ ಇಂಗ್ಲೆಂಡ್ ಆಟಗಾರರು ಬುಧವಾರ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್.
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
Advertisement