ಕಾನೂನು ಹೋರಾಟದಲ್ಲಿ ಕ್ರಿಕೆಟಿಗ ಮೊಹಮದ್ ಶಮಿಗೆ ಹಿನ್ನಡೆ: ಪತ್ನಿ, ಮಗಳ ಜೀವನ ನಿರ್ವಹಣೆಗೆ ಮಾಸಿಕ 4 ಲಕ್ಷ ರೂ ನೀಡಲು ಕೋರ್ಟ್ ಆದೇಶ

ಶಮಿ ಆರ್ಥಿಕ ಪರಿಸ್ಥಿತಿಯು ಹೆಚ್ಚಿನ ಜೀವನಾಂಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಜಹಾನ್ ಕಾನೂನು ಸಲಹೆಗಾರರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು.
Mohammed Shami with estranged wife Hasin Jahan
ಮೊಹಮದ್ ಶಮಿ ಮತ್ತು ಹಸಿನ್ ಜಹಾನ್ (ಸಂಗ್ರಹ ಚಿತ್ರ)
Updated on

ಕೋಲ್ಕತ್ತ: ಕಾನೂನು ಸಂಘರ್ಷ ಪೂರ್ಣಗೊಳ್ಳುವವರೆಗೆ ಪತ್ನಿ ಹಸೀನ್‌ ಜಹಾನ್‌ ಹಾಗೂ ಮಗಳ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 4 ಲಕ್ಷ ರು. ಪಾವತಿಸುವಂತೆ ಕ್ರಿಕೆಟಿಗ ಮೊಹಮ್ಮದ್‌ ಶಮಿ ಅವರಿಗೆ ಕೊಲ್ಕತ್ತ ಹೈಕೋರ್ಟ್‌ ಆದೇಶಿಸಿದೆ.

ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರಿದ್ದ ಪೀಠವು ಆದೇಶ ಹೊರಡಿಸಿದೆ. ಶಮಿ ಪತ್ನಿ ಜಹಾನ್ ವೈಯಕ್ತಿಕ ಜೀವನಾಂಶಕ್ಕಾಗಿ ತಿಂಗಳಿಗೆ 1.5 ಲಕ್ಷ ರೂಪಾಯಿ ಮತ್ತು ಅಪ್ರಾಪ್ತ ಮಗಳ ಆರೈಕೆ, ವೆಚ್ಚಗಳಿಗಾಗಿ 2.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿದ್ದಾರೆ.

ಶಮಿ ತಿಂಗಳಿಗೆ 50,000 ರೂ. ಮತ್ತು ತಮ್ಮ ಮಗಳ ಖರ್ಚಿಗಾಗಿ ಹೆಚ್ಚುವರಿಯಾಗಿ 80,000 ರೂ.ಗಳನ್ನು ಪಾವತಿಸುವಂತೆ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯವು 2018 ರಲ್ಲಿ ನೀಡಿದ್ದ ಆದೇಶದ ವಿರುದ್ಧ ಜಹಾನ್ ಮೇಲ್ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ, ಜಹಾನ್ ತನಗೆ 7 ಲಕ್ಷ ರೂ. ಮತ್ತು ತನ್ನ ಮಗಳಿಗೆ 3 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಕೇಳಿದ್ದರು. ಆದರೆ, ಕೆಳಹಂತದ ನ್ಯಾಯಾಲಯವು ಅವರ ವಿನಂತಿಯನ್ನು ವಜಾಗೊಳಿಸಿತ್ತು.

ಶಮಿ ಆರ್ಥಿಕ ಪರಿಸ್ಥಿತಿಯು ಹೆಚ್ಚಿನ ಜೀವನಾಂಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಜಹಾನ್ ಕಾನೂನು ಸಲಹೆಗಾರರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು. 2021 ರ ಹಣಕಾಸು ವರ್ಷದ ಅವರ ಆದಾಯ ತೆರಿಗೆ ರಿಟರ್ನ್ ಪ್ರಕಾರ, ಶಮಿ ಅವರ ವಾರ್ಷಿಕ ಆದಾಯ ಸುಮಾರು 7.19 ಕೋಟಿ ರೂ. ಅಂದರೆ, ತಿಂಗಳಿಗೆ ಸುಮಾರು 60 ಲಕ್ಷ ರೂ. ಆಗಿತ್ತು. ಜಹಾನ್ ತನ್ನ ಮಗಳ ಖರ್ಚು ಸೇರಿದಂತೆ ತನ್ನ ಒಟ್ಟು ಮಾಸಿಕ ಖರ್ಚು 6 ಲಕ್ಷ ರೂ. ಮೀರಿದೆ ಎಂದು ಹೇಳಿಕೊಂಡಿದ್ದಾರೆ.

Mohammed Shami with estranged wife Hasin Jahan
ಕಥುವಾ ರೇಪ್ ಕೇಸ್ ಗೂ, ನನ್ನ ಪ್ರಕರಣಕ್ಕೂ ಹೋಲಿಕೆಯಿದೆ: ಕ್ರಿಕೆಟಿಗ ಮೊಹಮದ್ ಶಮಿ ಪತ್ನಿ

ಈ ವಿವರಗಳನ್ನು ಗಣನೆಗೆ ತೆಗೆದುಕೊಂಡು, ಹೈಕೋರ್ಟ್ ಜಹಾನ್ ಪರವಾಗಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಮುಖರ್ಜಿ ಆದೇಶದಲ್ಲಿ, ನನ್ನ ಅಭಿಪ್ರಾಯದಲ್ಲಿ ಅರ್ಜಿದಾರರ ಸಂಖ್ಯೆ 1 (ಪತ್ನಿ) ಗೆ ತಿಂಗಳಿಗೆ 1,50,000 ರೂ. ಮತ್ತು ಅವರ ಮಗಳಿಗೆ 2,50,000 ರೂ. ಮೊತ್ತವನ್ನು ನೀಡುವುದು ನ್ಯಾಯಯುತ. ಇದು ಎರಡೂ ಅರ್ಜಿದಾರರಿಗೆ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಹಿಂದಿನ ತೀರ್ಪಿನ ಆಧಾರವನ್ನು ಹೈಕೋರ್ಟ್ ಪ್ರಶ್ನಿಸಿದ್ದು, ಅಲಿಪೋರ್ ನ್ಯಾಯಾಲಯವು ಯಾವ ಆಧಾರದ ಮೇಲೆ ಕಡಿಮೆ ಜೀವನಾಂಶ ಕೊಡುವಂತೆ ತೀರ್ಪು ನೀಡಿದೆ ಎಂಬುದು ಸ್ಪಷ್ಟವಾಗಿಲ್ಲ. ಶಮಿ ಗಳಿಕೆ ಚೆನ್ನಾಗಿಯೇ ಇದೆ. ಅವರ ಪತ್ನಿ ಜಹಾನ್ ಮರುಮದುವೆಯಾಗಿಲ್ಲ. ತನ್ನ ಮಗಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಹೀಗಾಗಿ, ಹಿಂದಿನ ತೀರ್ಪಿನಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಶಮಿ ಅವರನ್ನು 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ಜಹಾನ್‌, ಅವರ (ಪತಿ) ವಿರುದ್ಧ 2018ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಶಮಿ ಹಾಗೂ ಅವರ ಕುಟುಂಬದವರು ತಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹಾಗೆಯೇ, ತಮ್ಮ ಮಗಳ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿ ‌'ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ (PWDV) ಕಾಯ್ದೆ–2005'ರ ಸೆಕ್ಷನ್‌ 12ರ ಅಡಿಯಲ್ಲಿ ಜಾದವಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com