
ಭಾರತ U19 ಕ್ರಿಕೆಟ್ ತಂಡದ ತಾರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಈ ಬಾರಿ ಭಾರತ U19 ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕವನ್ನು ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 14 ವರ್ಷದ ಈ ಆಟಗಾರ 31 ಎಸೆತಗಳಲ್ಲಿ 86 ರನ್ ಗಳಿಸಿ ಭಾರತಕ್ಕೆ ನಾರ್ಥಾಂಪ್ಟನ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟರು. ಐದು ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 2-1 ಮುನ್ನಡೆ ಪಡೆದಿದೆ.
ಸೂರ್ಯವಂಶಿ ಅರ್ಧಶತಕ ದಾಖಲಿಸಲು ಕೇವಲ 14 ಎಸೆತಗಳನ್ನು ತೆಗೆದುಕೊಂಡರು. ಉತ್ತಮ ಫಾರ್ಮ್‌ನಲ್ಲಿ ಕಂಡುಬಂದ ಅವರು ತಮ್ಮ ಇನಿಂಗ್ಸ್‌ನಲ್ಲಿ ಆರು ಬೌಂಡರಿಗಳು ಮತ್ತು ಒಂಬತ್ತು ಸಿಕ್ಸರ್ ಬಾರಿಸಿದರು ಮತ್ತು 277.41 ರ ಸ್ಟ್ರೈಕ್ ರೇಟ್ ಹೊಂದಿದ್ದರು. ಈ ಇನಿಂಗ್ಸ್ ಮೂಲಕ ವೈಭವ್, U19 ಏಕದಿನ ಇತಿಹಾಸದಲ್ಲಿ ಅತಿ ವೇಗದ 80 ರನ್‌ಗಳ ದಾಖಲೆಯನ್ನು ಹೊಂದಿದ್ದ ಸುರೇಶ್ ರೈನಾ ಅವರ ದಾಖಲೆ ಮುರಿದರು.
ಅಷ್ಟೇ ಅಲ್ಲದೆ, ಸೂರ್ಯವಂಶಿ ಅವರ ಈ ಅರ್ಧಶತಕವು ಯೂತ್ ಏಕದಿನ ಪಂದ್ಯಗಳಲ್ಲಿ ನಾಲ್ಕನೇ ವೇಗದ ಅರ್ಧಶತಕ ಮತ್ತು ರಿಷಭ್ ಪಂತ್ ನಂತರ ಭಾರತೀಯನೊಬ್ಬ ಗಳಿಸಿದ ಎರಡನೇ ಅರ್ಧಶತಕವಾಗಿತ್ತು. ಅವರು ಭಾರತದ ಪರ U19 ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ 8 ಸಿಕ್ಸರ್‌ಗಳನ್ನು ಬಾರಿಸಿದ್ದ ಮಂದೀಪ್ ಸಿಂಗ್ ಅವರ ದಾಖಲೆಯನ್ನು ಮುರಿದರು.
ನಾಯಕ ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ವೈಭವ್ ತಂಡವನ್ನು ಮುನ್ನಡೆಸುತ್ತಿದ್ದರು. ನಾರ್ಥಾಂಪ್ಟನ್ ತಂಡವು U19 ತಂಡಕ್ಕೆ 269 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿ ಬೆನ್ನತ್ತಿದ ಭಾರತಕ್ಕೆ 14 ವರ್ಷದ ಬಾಲಕ ವೈಭವ್ ಭಾರತಕ್ಕೆ ಪರಿಪೂರ್ಣ ರನ್ ಚೇಸಿಂಗ್‌ಗೆ ವೇದಿಕೆ ಸಿದ್ಧಪಡಿಸಿದರು. ಸೂರ್ಯವಂಶಿ ಅವರು ಔಟಾದ ಹೊತ್ತಿಗೆ ಭಾರತ ತಂಡ ಕೇವಲ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತ್ತು. ನಂತರ ವಿಹಾನ್ ಮಲ್ಹೋತ್ರಾ (46), ಕನಿಷ್ಕ್ ಚೌಹಾಣ್ (43) ಮತ್ತು ಆರ್‌ಎಸ್ ಅಂಬ್ರೀಶ್ (31) ಅವರ ನೆರವಿನಿಂದ ಇನ್ನೂ 33 ಎಸೆತಗಳು ಬಾಕಿ ಇರುವಾಗಲೇ ಭಾರತ ಗೆಲುವಿನ ದಡ ಸೇರಿತು.
ಸೂರ್ಯವಂಶಿ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2025 ರಲ್ಲಿ ತಮ್ಮ ಅಮೋಘ ಶತಕದೊಂದಿಗೆ ಗಮನ ಸೆಳೆದ ನಂತರ, ಇಂಗ್ಲೆಂಡ್‌ನಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ಕೇವಲ 3 ಯೂತ್ ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅದರಲ್ಲಿ 48, 45 ಮತ್ತು 86 ರನ್ ಗಳಿಸಿದ್ದಾರೆ.
Advertisement