
ವೋರ್ಸೆಸ್ಟರ್: ಐಪಿಎಲ್ ನಲ್ಲಿ ಗುಜರಾತ್ ವಿರುದ್ಧ ಅತಿ ವೇಗದಲ್ಲಿ ಶತಕ ಗಳಿಸುವ ಮೂಲಕ ದೇಶಾದ್ಯಂತ ರಾತ್ರೋ ರಾತ್ರಿ ಪ್ರಸಿದ್ಧಿಯಾಗಿದ್ದ ಭಾರತದ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಯೂತ್ ಏಕದಿನ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸುವ ವಿಶ್ವದಾಖಲೆ ಬರೆದಿದ್ದಾರೆ.
ಶನಿವಾರ ವೋರ್ಸೆಸ್ಟರ್‌ನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ನಾಲ್ಕನೇ ಯೂತ್ ಏಕದಿನ ಪಂದ್ಯದಲ್ಲಿ 52 ಎಸೆತಗಳ ಶತಕ ಸಿಡಿಸಿದ್ದಾರೆ. ಈ ಮೂಲಕ ಪುರುಷರ ಯೂತ್ ಏಕದಿನ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಪಾಕಿಸ್ತಾನದ ಕಮ್ರಾಮ್ ಗುಲಾಮ್ ಅವರ ದಾಖಲೆಯನ್ನು ಹಿಂದಿಕ್ಕಿದ್ದರು.
ಕೊನೆಗೆ 78 ಎಸೆತಗಳಲ್ಲಿ 143 ರನ್ ಗಳಿಸಿದ ಸೂರ್ಯವಂಶಿ ಅವರನ್ನು ಬೇನ್ ಮೇಯಸ್ ಔಟ್ ಮಾಡಿದರು. ಅವರು 13 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇಲ್ಲಿಯವರೆಗಿನ ನಾಲ್ಕು ಪಂದ್ಯಗಳಲ್ಲಿ 306 ರನ್ ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚಿನ ರನ್ ಗಳಿಸಿರುವ ಪ್ರಮುಖ ಆಟಗಾರ ಕೂಡಾ ಆಗಿದ್ದಾರೆ.
ಹಿಂದಿನ ಪಂದ್ಯದಲ್ಲಿ ಯೂತ್ ಏಕದಿನ ಪಂದ್ಯಗಳಲ್ಲಿ ವೇಗವಾಗಿ ಅರ್ಧ ಶತಕ ಗಳಿಸಿದ ರಿಷಭ್ ಪಂತ್ ಅವರ ದಾಖಲೆ ಮುರಿಯುವಲ್ಲಿ ಸ್ವಲ್ಪ ದೂರ ಉಳಿದರು. ಪಂತ್ 2016 ರಲ್ಲಿ ನೇಪಾಳ ವಿರುದ್ಧ ಕೇವಲ 18 ಎಸೆತಗಳಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದ್ದರು. ಸೂರ್ಯವಂಶಿ 20 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಸೂರ್ಯವಂಶಿ 31 ಎಸೆತಗಳಲ್ಲಿ ಆರು ಬೌಂಡರಿ, 9 ಸಿಕ್ಸರ್ ಗಳೊಂದಿಗೆ 86 ರನ್ ಗಳಿಸಿದರು.
2025 ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅತ್ಯುತ್ತಮ ಬ್ಯಾಟರ್ ಆಗಿ ಹೊರಹೊಮ್ಮಿದ್ದ ಸೂರ್ಯವಂಶಿ ಕೇವಲ ಏಳು ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕದೊಂದಿಗೆ 252 ರನ್ ಗಳಿಸಿದ್ದರು. ಅದರಲ್ಲೂ ಜೈಪುರದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಅವರ ಸ್ಫೋಟಕ ಶತಕಕ್ಕೆ ಕ್ರಿಕೆಟ್ ಜಗತ್ತು ನಿಬ್ಬೆರಗಾಗಿತ್ತು. ಸೂರ್ಯವಂಶಿ ಕೇವಲ 38ಎಸೆತಗಳಲ್ಲಿ 101 ರನ್ ಗಳಿಸಿದ್ದರು.
Advertisement