
ಬರ್ಮಿಂಗ್ಹ್ಯಾಮ್: ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳ ಅಂತರದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಆಕಾಶ್ ದೀಪ್ ಅವರ ಅತ್ಯುತ್ತಮ ಪ್ರದರ್ಶನ ಪ್ರಮುಖ ಪಾತ್ರ ವಹಿಸಿದೆ.
ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಗಳಿಸಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಪಡೆದರು. ಈ ಮೂಲಕ ಒಟ್ಟು 10 ವಿಕೆಟ್ ಪಡೆದು ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಪ್ರಮುಖ ಕೊಡುಗೆ ನೀಡಿದರು.
ಅಲ್ಲದೇ ಚೇತನ್ ಶರ್ಮಾ 1986ರಲ್ಲಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದರು. 10 ವಿಕೆಟ್ ಪಡೆದ ಭಾರತದ ಎರಡನೇ ವೇಗಿ ಎಂಬ ಖ್ಯಾತಿಗೂ ಪಾತ್ರರಾದರು.
ಈ ಭರ್ಜರಿ ಗೆಲುವನ್ನು ಆಕಾಶ್ ದೀಪ್ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಸಹೋದರಿಗೆ ಅರ್ಪಿಸಿದ್ದಾರೆ. ಪಂದ್ಯದ ಬಳಿಕ ಜಿಯೋ ಹಾಟ್‌ಸ್ಟಾರ್‌ನಲ್ಲಿ ಚೇತೇಶ್ವರ ಪೂಜಾರ ಅವರೊಂದಿಗೆ ಮಾತನಾಡಿದ ಆಕಾಶ್ ದೀಪ್, ‘ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ, ಆದರೆ ಎರಡು ತಿಂಗಳ ಹಿಂದೆ ನನ್ನ ಸಹೋದರಿಗೆ (ಅಕ್ಕ) ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಈಗ ಚೆನ್ನಾಗಿದ್ದಾರೆ. ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಟ್ಟಿದ್ದಾರೆ ಅಂದುಕೊಂಡಿದ್ದೇನೆ. ಅವರ ಮುಖದಲ್ಲಿ ನಗುವನ್ನು ನೋಡಲು ಬಯಸಿದೆ. ಈ ಪಂದ್ಯವನ್ನು ಅವರಿಗೆ ಅರ್ಪಿಸುವುದಾಗಿ ತಿಳಿಸಿದರು.
ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ನಿನ್ನ ಮುಖ ನನ್ನ ಮನಸ್ಸಿನಲ್ಲಿರುತ್ತದೆ. ನಿನ್ನ ಮೊಗದಲ್ಲಿ ಸಂತೋಷ ನೋಡಲು ಬಯಸುತ್ತೇನೆ. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ ಎಂದು ಭಾವಾನಾತ್ಮಕ ಸಂದೇಶ ಕಳುಹಿಸಿದ್ದಾರೆ.
Advertisement