
ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್ ಅವರು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಆಕಾಶ್ ದೀಪ್ ಅವರನ್ನು ಶ್ಲಾಘಿಸಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಆಟಗಾರ ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್‌ನಿಂದ ಹೊರಗುಳಿದ ನಂತರ ಆಕಾಶ್ ದೀಪ್ ಅವರಿಗೆ ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಸ್ಥಾನ ದೊರಕಿತು. ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿರುವ ಆಕಾಶ್ ದೀಪ್, ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಮತ್ತು 2 ನೇ ಇನಿಂಗ್ಸ್‌ನಲ್ಲಿಯೂ 2 ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ.
4ನೇ ದಿನದಂದು, ಆಕಾಶ್ ಕೇವಲ 6 ರನ್‌ಗಳಿಗೆ ಜೋ ರೂಟ್ ಅವರನ್ನು ಔಟ್ ಮಾಡಿದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊರ್ಕೆಲ್, ಬೌಲರ್ ಇಂಗ್ಲೆಂಡ್‌ನಲ್ಲಿ ಗೋಲ್ಡನ್ ರೂಲ್ ಅನ್ನು ಸಂಪೂರ್ಣವಾಗಿ ಅನುಸರಿಸಿದರು ಮತ್ತು ಸ್ಥಿರವಾಗಿ ಸ್ಟಂಪ್‌ಗಳನ್ನು ಗುರಿಯಾಗಿಸಿಕೊಂಡರು ಎಂದರು.
'ಅವರು ಆಕ್ರಮಣಕಾರಿ ಬೌಲರ್ ಆಗಿದ್ದಾರೆ. ಸ್ಟಂಪ್ ಮೇಲೆ ಬೌಲಿಂಗ್ ಮಾಡುತ್ತಾರೆ. ಇಂಗ್ಲೆಂಡ್‌ನಲ್ಲಿ ಇದು ಗೋಲ್ಡನ್ ರೂಲ್‌ಗಳಲ್ಲಿ ಒಂದಾಗಿದೆ: ಸ್ಟಂಪ್‌ಗಳ ಮೇಲೆ ಬೌಲಿಂಗ್ ಮಾಡುವುದು ಮುಖ್ಯವಾಗಿದೆ. ಆದ್ದರಿಂದ ಯುಕೆಯಲ್ಲಿನ ಈ ರೀತಿಯ ಪರಿಸ್ಥಿತಿಗಳು ಅವರ ಶೈಲಿಗೆ ಸರಿಹೊಂದುತ್ತದೆ. ಗಾಯದಿಂದ ಚೇತರಿಸಿಕೊಂಡು ಬಂದ ನಂತರ ಅವರು ಹೆಚ್ಚಿನ ವೇಗದಲ್ಲಿ ಓಡುವುದನ್ನು ನೋಡುವುದು ನಮಗೆ ಉತ್ತಮ ಸಂಕೇತವಾಗಿದೆ' ಎಂದು ಮಾರ್ಕೆಲ್ ಹೇಳಿದರು.
ಎರಡನೇ ಇನಿಂಗ್ಸ್‌ನಲ್ಲಿ ಆಕಾಶ್ ಅವರಿಗೆ ಮೊದಲು ವಿಕೆಟ್ ಒಪ್ಪಿಸಿದ್ದು ಬೆನ್ ಡಕೆಟ್ ಆಗಿದ್ದರು. ಜೋ ರೂಟ್ ಅವರ ರೀತಿಯಲ್ಲಿಯೇ ಬೌಲ್ಡ್ ಆಗಿ ಔಟ್ ಆದರು. ಅಂತಿಮ ಮತ್ತು 4ನೇ ದಿನದಂದೂ ಆಕಾಶ್ ದೀಪ್ ಅವರು ತಮ್ಮ ಎಸೆತಗಳನ್ನು ಪುನರಾವರ್ತಿಸಬಹುದು ಮತ್ತು ಕನಿಷ್ಠ ಒಂದೆರಡು ವಿಕೆಟ್‌ಗಳನ್ನು ಹೆಚ್ಚು ತೆಗೆಯಬಹುದು ಎಂದರು.
'ಅದು ಕನಸಿನ ಎಸೆತವಾಗಿತ್ತು... ಉತ್ತಮ ಗುಣಮಟ್ಟದ ಆಟಗಾರ ಜೋ ರೂಟ್ ಅವರನ್ನು ಔಟ್ ಮಾಡುವುದು ಆಕಾಶ್‌ನ ಗುಣಮಟ್ಟದ ಬೌಲಿಂಗ್ ಅನ್ನು ತೋರಿಸುತ್ತದೆ. ಅವರು ಏನು ಮಾಡಬಲ್ಲರು ಎಂಬುದನ್ನು ತೋರಿಸುತ್ತದೆ. ಅವರು ಕೂಡ ನಮ್ಮೆಲ್ಲರಂತೆಯೇ ಒಬ್ಬ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನೀವು ಅವರಿಗೆ ಹೆಚ್ಚು ಆತ್ಮವಿಶ್ವಾಸವನ್ನು ನೀಡಿದಾಗ, ಅದು ಚೆಂಡಿನ ಮೂಲಕ ಕೆಲಸ ಮಾಡುತ್ತದೆ. ನಾಳೆಯೂ ಇದೇ ರೀತಿಯ ಆಟ ಮುಂದುವರಿಯುತ್ತದೆ ಎಂದು ಆಶಿಸುತ್ತೇನೆ' ಎಂದು ಅವರು ಹೇಳಿದರು.
Advertisement