
ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆತಿಥೇಯರನ್ನು ಆ ಸ್ಥಳದಲ್ಲಿ ಸೋಲಿಸಿತು. ಶುಭಮನ್ ಗಿಲ್ ಅವರಿಗೂ ಮುನ್ನ ಇದ್ದ ಯಾವೊಬ್ಬ ನಾಯಕನೂ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿರಲಿಲ್ಲ. ಹೀಗಾಗಿ, ಈ ಬಾರಿಯೂ ಭಾರತ ತಂಡ ಗೆಲುವು ಸಾಧಿಸಬಹುದೆಂಬ ನಂಬಿಕೆ ಇರಲಿಲ್ಲ. ಜಸ್ಪ್ರೀತ್ ಬುಮ್ರಾ ಅವರಿದೆ ಎರಡನೇ ಪಂದ್ಯದಿಂದ ವಿಶ್ರಾಂತಿ ನೀಡಿದ್ದು ಕೂಡ ಟೀಕೆಗೆ ಗುರಿಯಾಗಿತ್ತು. ಎಡ್ಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾದ ಇತಿಹಾಸದ ಬಗ್ಗೆ ಇಂಗ್ಲಿಷ್ ಪತ್ರಕರ್ತರೊಬ್ಬರು ಎತ್ತಿ ತೋರಿಸಿದ್ದರು. ಭಾರತ ಅಲ್ಲಿ ಇದುವರೆಗೂ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದಿದ್ದರು.
ಪಂದ್ಯದ ನಂತರ ಶುಭಮನ್ ಗಿಲ್ ಪತ್ರಿಕಾಗೋಷ್ಠಿಗೆ ಆಗಮಿಸಿದಾಗ, ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ತನ್ನ ಮುಂದೆ ಕಹಿ ಅಂಕಿಅಂಶಗಳನ್ನು ಎತ್ತಿ ತೋರಿಸಿದ ಅದೇ ಪತ್ರಕರ್ತನನ್ನು ಹುಡುಕಿದರು.
'ನನ್ನ ನೆಚ್ಚಿನ ಪತ್ರಕರ್ತನನ್ನು ನಾನು ನೋಡಲು ಕಾಣಿಸುತ್ತಿಲ್ಲ. ಅವರು ಎಲ್ಲಿದ್ದಾರೆ? ನಾನು ಅವರನ್ನು ನೋಡಲು ಬಯಸಿದ್ದೆ' ಎಂದು ಗಿಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
'ಟೆಸ್ಟ್ ಪಂದ್ಯಕ್ಕೂ ಮುನ್ನವೇ ನಾನು ಹೇಳಿದ್ದೆ, ನನಗೆ ಇತಿಹಾಸ ಮತ್ತು ಅಂಕಿಅಂಶಗಳಲ್ಲಿ ನಿಜವಾಗಿಯೂ ನಂಬಿಕೆ ಇಲ್ಲ ಎಂದು. ಕಳೆದ 56 ವರ್ಷಗಳಲ್ಲಿ, ನಾವು ಒಂಬತ್ತು ಪಂದ್ಯಗಳನ್ನು ಆಡಿದ್ದೇವೆ. ವಿಭಿನ್ನ ತಂಡಗಳು ಇಲ್ಲಿಗೆ ಬಂದಿವೆ. ಇಲ್ಲಿಗೆ ಬಂದಿರುವ ಅತ್ಯುತ್ತಮ ತಂಡ ನಮ್ಮದು ಎಂದು ನಾನು ನಂಬುತ್ತೇನೆ ಮತ್ತು ಅವರನ್ನು (ಇಂಗ್ಲೆಂಡ್) ಸೋಲಿಸುವ, ಇಲ್ಲಿ ಸರಣಿಯನ್ನು ಗೆಲ್ಲುವ ಸಾಮರ್ಥ್ಯ ನಮಗಿದೆ. ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮತ್ತು ಹೋರಾಡುವುದನ್ನು ಮುಂದುವರಿಸಿದರೆ, ಇದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸರಣಿಗಳಲ್ಲಿ ಒಂದಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.
ವಿಶ್ವದ ಶ್ರೇಷ್ಠ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರು ತಂಡದಿಂದ ಹೊರಗುಳಿದಿದ್ದಾಗ ಸಂದರ್ಭಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ ವೇಗಿಗಳಾದ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದ ನಾಯಕ ಗಿಲ್ ಶ್ಲಾಘಿಸಿದರು.
'ನಮ್ಮ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ನಾವು ಎಲ್ಲಿ ಬೇಕಾದರೂ 20 ವಿಕೆಟ್‌ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ. ಸಿರಾಜ್, ಆಕಾಶ್ ಮತ್ತು ಪ್ರಸಿದ್ಧ್ ಕೂಡ ನಾವು ಗೆಲ್ಲಲು ನೆರವಾದರು. ಅದು ವ್ಯತ್ಯಾಸವನ್ನುಂಟು ಮಾಡುತ್ತದೆ' ಎಂದು ಅವರು ಹೇಳಿದರು.
'ಫ್ಲ್ಯಾಟ್ ಪಿಚ್‌ನಲ್ಲಿ ಚೆಂಡು ಮೃದುವಾಗಿದ್ದಾಗ, ರನ್‌ಗಳನ್ನು ತಡೆಯುವುದು ಕಷ್ಟ. ಗಟ್ಟಿಯಾದ ಚೆಂಡಿನೊಂದಿಗೆ, ವಿಕೆಟ್‌ಗಳು ಸುಲಭವಾಗಿ ಬರುತ್ತವೆ. ಆ ಎರಡನೇ ಹೊಸ ಚೆಂಡಿನ ಸ್ಪೆಲ್ ನಮ್ಮ ಕಡೆಗೆ ಪಂದ್ಯವನ್ನು ತಿರುಗಿಸಿತು' ಎಂದು ಅವರು ಹೇಳಿದರು.
ತಮ್ಮ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿಯೇ ನಾನು ಇಂಗ್ಲೆಂಡ್ ಸರಣಿಗೆ ತಯಾರಿ ಆರಂಭಿಸಿದ್ದೆ ಎಂದು ಗಿಲ್ ಹೇಳಿದರು.
'ಐಪಿಎಲ್ ಆವೃತ್ತಿಯ ಕೊನೆಯ ಹಂತದಲ್ಲಿ ನಾನು ಕೆಲವು ವಿಷಯಗಳ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿದೆ. ನಾವು ಹೊರಗಿನ ಮಾತುಗಳನ್ನು ಕೇಳುವುದಿಲ್ಲ. ಅಭಿಪ್ರಾಯಗಳು ಪ್ರತಿ ಪಂದ್ಯದಲ್ಲೂ ಬದಲಾಗುತ್ತವೆ. ನಿಮ್ಮ ತಂಡದ ಸದಸ್ಯರು ನಿಮ್ಮನ್ನು ನಂಬಿದರೆ, ಅದು ಮುಖ್ಯ' ಎಂದರು.
Advertisement