
ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಪುರುಷರ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್‌ನ ಬಲಗೈ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ತಮ್ಮ ತಂಡದ ಸಹ ಆಟಗಾರ ಜೋ ರೂಟ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಮರಳಿ ಪಡೆದಿದ್ದಾರೆ.
ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 158 ರನ್‌ಗಳ ಅದ್ಭುತ ಇನ್ನಿಂಗ್ಸ್ ನಂತರ ಬ್ರೂಕ್ ಅಗ್ರಸ್ಥಾನಕ್ಕೆ ಏರಿದ್ದಾರೆ.
ಐಸಿಸಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಜೋ ರೂಟ್ ಇತ್ತೀಚಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ ಮತ್ತು ಈಗ ತಮ್ಮ ಜೂನಿಯರ್ ತಂಡದ ಸಹ ಆಟಗಾರನಿಗಿಂತ 18 ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದಾರೆ.
ಇನ್ನುಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಆರನೇ ಸ್ಥಾನಕ್ಕೆ ಜಿಗಿಯುವ ಮೂಲಕ ಇದೇ ಮೊದಲ ಬಾರಿಗೆ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.
ಎಜ್ ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್ ನಲ್ಲಿ 269 ರನ್ ಮತ್ತು ಎರಡನೇ ಇನಿಂಗ್ಸ್ ನಲ್ಲಿ 161 ರನ್ ಗಳಿಸಿ ಟೆಸ್ಟ್ ನಾಯಕನಾಗಿ ಮೊದಲ ಗೆಲುವು ದಾಖಲಿಸಿದ್ದ ಗಿಲ್ ಈಗ ಬ್ರೂಕ್‌ಗಿಂತ ಕೇವಲ 79 ರೇಟಿಂಗ್ ಪಾಯಿಂಟ್‌ಗಳಷ್ಟು ಹಿಂದಿದ್ದಾರೆ. ರೂಟ್ (ಎರಡನೇ), ಕೇನ್ ವಿಲಿಯಮ್ಸನ್ (ಮೂರನೇ), ಯಶಸ್ವಿ ಜೈಸ್ವಾಲ್ (ನಾಲ್ಕನೇ), ಮತ್ತು ಸ್ಟೀವ್ ಸ್ಮಿತ್ (ಐದನೇ) ಅವರು ಗಿಲ್ ಗಿಂತ ಮುಂದಿದ್ದಾರೆ.
ಭಾರತದ ಅನುಭವಿ ಆಟಗಾರ ರವೀಂದ್ರ ಜಡೇಜಾ ಅವರು ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಅವರ ತಂಡದ ಸಹ ಆಟಗಾರ ಜಸ್ಪ್ರಿತ್ ಬುಮ್ರಾ ತಮ್ಮ ಕೆಲಸದ ಒತ್ತಡದಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಆಡದಿದ್ದರೂ ಬೌಲರ್ ಗಳ ವಿಭಾಗದಲ್ಲಿ ನಂ. 1 ಸ್ಥಾನದಲ್ಲಿದ್ದಾರೆ.
Advertisement