
ಲಂಡನ್: ಲಾರ್ಡ್ಸ್‌ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ಸ್ಟಾರ್ ವೇಗಿ ಜೋಫ್ರಾ ಆರ್ಚರ್ 2021ರ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಐದು ಪಂದ್ಯಗಳ ಸರಣಿಯು ಸದ್ಯ 1-1 ರಿಂದ ಸಮಬಲಗೊಂಡಿದೆ. ಮೂರನೇ ಟೆಸ್ಟ್ ಗೆಲ್ಲುವ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್, ಇತ್ತೀಚಿನ ವರ್ಷಗಳಲ್ಲಿ ಗಾಯಗಳಿಂದ ಬಳಲುತ್ತಿದ್ದ ಆರ್ಚರ್ ಅವರನ್ನು ತಂಡಕ್ಕೆ ಕರೆತಂದಿದ್ದು, ತಮ್ಮ ಬೌಲಿಂಗ್ ದಾಳಿಯನ್ನು ಬಲಪಡಿಸಿಕೊಳ್ಳುವ ಭರವಸೆಯಲ್ಲಿದೆ.
ಜೋಶ್ ಟಂಗ್ ಬದಲಿಗೆ ಆರ್ಚರ್ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ.
'ಲಾರ್ಡ್ಸ್‌ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ಗಾಗಿ ಇಂಗ್ಲೆಂಡ್ ತಂಡ ಪ್ಲೇಯಿಂಗ್ XI ನಲ್ಲಿ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ.
'ಜೋಶ್ ಟಂಗ್ ಬದಲಿಗೆ ವೇಗದ ಬೌಲರ್ ಜೋಫ್ರಾ ಆರ್ಚರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 2021ರ ಫೆಬ್ರುವರಿ ಬಳಿಕ ಆರ್ಚರ್ ಅವರ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಅವರು ಕೊನೆಯ ಬಾರಿಗೆ ಭಾರತದ ವಿರುದ್ಧದ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ಭಾಗವಾಗಿದ್ದರು' ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಮೊಣಕೈ ಮತ್ತು ಬೆನ್ನುನೋವಿನ ನಂತರ ಆರ್ಚರ್ 2021 ರಿಂದ ಇಂಗ್ಲೆಂಡ್ ಪರ ವೈಟ್ ಬಾಲ್ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ.
2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ನಂತರ 30 ವರ್ಷದ ವೇಗಿ 13 ಟೆಸ್ಟ್ ಪಂದ್ಯಗಳಲ್ಲಿ 31.04 ಸರಾಸರಿಯಲ್ಲಿ 42 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ XI
ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಶೋಯೆಬ್ ಬಶೀರ್.
Advertisement