
ಸೆಪ್ಟೆಂಬರ್‌ನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಏಷ್ಯಾ ಕಪ್ 2025 ನ್ನು ಆಯೋಜಿಸುತ್ತಿರುವುದರಿಂದ ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದೊಂದಿಗೆ ಆಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಯೋಜಿಸಿದಂತೆ ನಡೆಯುವ ಸಾಧ್ಯತೆಯಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೂಲವನ್ನು ಉಲ್ಲೇಖಿಸಿ ವರದಿ ಪ್ರಕಟವಾಗಿದೆ. ಸ್ಪರ್ಧೆ ಮತ್ತು ಪಂದ್ಯದ ಕುರಿತು ಅಧಿಕೃತ ಘೋಷಣೆಯನ್ನು 'ಕೆಲವೇ ದಿನಗಳಲ್ಲಿ' ಮಾಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಎಲ್ಲಾ 25 ಸದಸ್ಯ ರಾಷ್ಟ್ರಗಳು ಕಾರ್ಯಕ್ರಮದ ಸ್ಥಳವನ್ನು ಚರ್ಚಿಸಲು ಭಾಗವಹಿಸಿದ್ದ ಎಸಿಸಿ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ. ಬಿಸಿಸಿಐ ನ್ನು ಉಪಾಧ್ಯಕ್ಷ ರಾಜೀವ್ ಶುಕ್ಲಾ ವರ್ಚುವಲ್ ಆಗಿ ಪ್ರತಿನಿಧಿಸಿದ್ದರು.
"ಬಿಸಿಸಿಐ ಯುಎಇಯಲ್ಲಿ ಏಷ್ಯಾ ಕಪ್ ನ್ನು ಆಯೋಜಿಸುತ್ತದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುವ ಸಾಧ್ಯತೆಯಿದೆ. ವೇಳಾಪಟ್ಟಿಯ ಕುರಿತು ಇನ್ನೂ ಚರ್ಚೆಗಳು ನಡೆಯುತ್ತಿವೆ" ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಹದಿನೈದು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ತಿಂಗಳ ಕೊನೆಯ ವಾರದೊಳಗೆ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭಿಸಲಿರುವ ಕಾರಣ, ತಿಂಗಳ ಕೊನೆಯ ವಾರದ ಮೊದಲು ಇದು ಕೊನೆಗೊಳ್ಳಬೇಕು.
"ನಮ್ಮ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಎಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಸದಸ್ಯರಿಗೆ ಮಾಹಿತಿ ನೀಡುತ್ತಾರೆ. ಕೆಲವು ದಿನಗಳಲ್ಲಿ ಅಧಿಕೃತವಾಗಿ ನಿಮಗೆ ತಿಳಿಯುತ್ತದೆ, ಆದ್ದರಿಂದ ನಾನು ಊಹಾಪೋಹಗಳನ್ನು ನಂಬುವುದಿಲ್ಲ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಿಟಿಐಗೆ ತಿಳಿಸಿದ್ದಾರೆ.
ಢಾಕಾದಲ್ಲಿ, ಎಸಿಸಿ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೂಡ ಕಾಂಟಿನೆಂಟಲ್ ಈವೆಂಟ್‌ನಲ್ಲಿ ಸಂಭಾವ್ಯ ಇಂಡೋ-ಪಾಕ್ ಪಂದ್ಯದ ಬಗ್ಗೆ ಕೇಳಿದಾಗ "ನಾವು ಈ ಬಗ್ಗೆ ಶೀಘ್ರದಲ್ಲೇ ಘೋಷಿಸುತ್ತೇವೆ. ನಾವು ಬಿಸಿಸಿಐ ಜೊತೆ ಚರ್ಚೆ ನಡೆಸಿದ್ದೇವೆ ಮತ್ತು ನಾವು ಶೀಘ್ರದಲ್ಲೇ ಪರಿಹರಿಸುವ ಕೆಲವು ಸಮಸ್ಯೆಗಳಿವೆ. ಎಲ್ಲಾ 25 ಸದಸ್ಯರು ಭೌತಿಕವಾಗಿ ಅಥವಾ ವರ್ಚುವಲ್ ಆಗಿ ಸಭೆಗೆ ಹಾಜರಾಗಿದ್ದರು. ನಾವೆಲ್ಲರೂ ಒಂದೇ ಅಭಿಪ್ರಾಯದಲ್ಲಿದ್ದೇವೆ" ಎಂದು ನಖ್ವಿ ವರದಿಗಾರರಿಗೆ ತಿಳಿಸಿದರು. ಬಿಸಿಸಿಐ ಒತ್ತಡದಿಂದಾಗಿ, ಕಾರ್ಯಸೂಚಿಯಲ್ಲಿರುವ 10 ಅಂಶಗಳಲ್ಲಿ ಎರಡನ್ನು ಮಾತ್ರ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
Advertisement