
ಲಾರ್ಡ್ಸ್: 8 ವರ್ಷಗಳ ಬಳಿಕ ಭಾರತ ತಂಡಕ್ಕೆ ವಾಪಸ್ ಆಗಿದ್ದ ಕರುಣ್ ನಾಯರ್ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿ ಇದೀಗ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ದೂರ ಉಳಿಯುವಂತಾಗಿದೆ.
ಹೌದು.. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 7 ಇನಿಂಗ್ಸ್ ಆಡಿದ್ದ ಕರುಣ್ ನಾಯರ್ ತ್ರಿಶತಕ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ ಈ ತ್ರಿಪಲ್ ಸೆಂಚುರಿ ಬಳಿಕ ವಿಫಲರಾದ ಕಾರಣ ಅವರನ್ನು ಆ ಬಳಿಕ ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.
8 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದ ಕನ್ನಡಿಗ
ಈ ಹಿಂದೆ ತಂಡದಿಂದ ದೂರವಿದ್ದು, ಡಿಯರ್ ಕ್ರಿಕೆಟ್… ಇನ್ನೊಂದು ಅವಕಾಶ ನೀಡು ಎಂದು ಕೇಳಿದ್ದ ಕರುಣ್ ನಾಯರ್ಗೆ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಮರಳಿ ಸ್ಥಾನ ಲಭಿಸಿತ್ತು. ಇದೀಗ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡರೂ ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಲಭಿಸಿದ ಅವಕಾಶದೊಂದಿಗೆ ಪ್ಲೇಯಿಂಗ್ ಇಲೆವೆನ್ನಲ್ಲೂ ಕಾಣಿಸಿಕೊಂಡರು.
ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಕರುಣ್ ನಾಯರ್ ಸಂಪೂರ್ಣ ವಿಫಲರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ 6 ಇನಿಂಗ್ಸ್ಗಳಲ್ಲಿ ಕರುಣ್ ಕಲೆಹಾಕಿದ ಒಟ್ಟು ಸ್ಕೋರ್ 131 ರನ್ಗಳು ಮಾತ್ರ. ಹೀಗಾಗಿಯೇ ನಾಲ್ಕನೇ ಟೆಸ್ಟ್ನಿಂದ ಕನ್ನಡಿಗ ಆಟಗಾರ ಕರುಣ್ ನಾಯರ್ ರನ್ನು ಕೈ ಬಿಡಲಾಗಿತ್ತು.
ಪೆವಿಲಿಯನ್ ನಲ್ಲಿ ಕಣ್ಣೀರು ಹಾಕಿದ್ದ ಕರುಣ್ ನಾಯರ್
ಇನ್ನು ಇತ್ತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕರುಣ್ ನಾಯರ್ ಅಳುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಕರುಣ್ ಕಣ್ಣೀರು ಹಾಕುತ್ತಿದ್ದರೆ, ಅತ್ತ ಕೆಎಲ್ ರಾಹುಲ್ ತನ್ನ ಸಹ ಆಟಗಾರನನ್ನು ಸಮಾಧಾನಪಡಿಸುತ್ತಿದ್ದರು. 4ನೇ ಪಂದ್ಯದ ಹೊತ್ತಿಗೆ ಈ ಫೋಟೋ ವ್ಯಾಪಕ ವೈರಲ್ ಆಗುತ್ತಿದೆ.
ಫೋಟೋ ಅಸಲಿಯತ್ತೇನು?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆ ತೆಗೆದಿದ್ದಲ್ಲ. ಬದಲಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಕಂಡು ಬಂದ ದೃಶ್ಯ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಕರುಣ್ ಕೇವಲ 14 ರನ್ಗಳಿಸಿ ಔಟಾಗಿದ್ದರು. ತನ್ನ ಕೆರಿಯರ್ಗೆ ನಿರ್ಣಾಯಕವಾಗಿದ್ದ ಈ ಇನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡದೇ ಔಟಾಗಿದ್ದರಿಂದ ಅವರು ನಿರಾಸೆಗೊಂಡಿದ್ದರು.
ಹೀಗಾಗಿಯೇ ಔಟಾದ ಬಳಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ಬೇಸರದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕರ್ನಾಟಕದ ಮತ್ತೋರ್ವ ಆಟಗಾರನಾಗಿರುವ ಕೆಎಲ್ ರಾಹುಲ್ ಅವರನ್ನು ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ.
ಇದೇ ಫೋಟೋ ಇದೀಗ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕಂಡು ಬಂದ ಸನ್ನಿವೇಶ ಎಂಬ ಟ್ಯಾಗ್ ಲೈನ್ನೊಂದಿಗೆ ಹರಿಬಿಡಲಾಗಿದೆ.
Advertisement