
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಇಂಗ್ಲೆಂಡ್ ಸ್ಥಾನ ಕುಸಿದಿದೆ.
ಹೌದು.. ನಿನ್ನೆ ಮ್ಯಾಂಚೆಸ್ಟರ್ ನಲ್ಲಿ ಮುಕ್ತಾಯವಾದ 4ನೇ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಕುಸಿತಕ್ಕೆ ಕಾರಣವಾಗಿದೆ.
ಇನ್ನು ಈ ಪಂದ್ಯ ಮುಕ್ತಾಯದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2025-27) ಸರಣಿಯ ನೂತನ ಪಾಯಿಂಟ್ಸ್ ಟೇಬಲ್ ಪ್ರಕಟವಾಗಿದ್ದು, ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ WTC ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೆ ಗೆಲ್ಲಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡ ಇಂಗ್ಲೆಂಡ್ ತಂಡ ಅಂಕ ಪಟ್ಟಿಯಲ್ಲಿ ಗಮನಾರ್ಹ ಕುಸಿತ ಕಂಡಿದೆ.
ಹಾಲಿ ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ಪ್ರಬಲ ಆಸ್ಟ್ರೇಲಿಯಾ ತಂಡ ಶೇಕಡಾವಾರು 100 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ಗೆಲುವು ಹಾಗೂ ಒಂದು ಡ್ರಾ ಸಾಧಿಸಿರುವ ಶ್ರೀಲಂಕಾ ತಂಡ ಶೇಕಡಾವಾರು 66.67 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ.
ಆದರೆ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ ಇಂಗ್ಲೆಂಡ್ ತಂಡ ಶೇಕಡವಾರು 54.17 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ದ್ವಿತೀಯ ಟೆಸ್ಟ್ನಲ್ಲಿ ಜಯ ಗಳಿಸಿರುವ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ತಂಡವು 33.33 ಶೇಕಡಾವಾರು ಅಂಕಗಳೊಂದಿಗೆ WTC ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಉಳಿದಂತೆ 16.67 ಶೇಕಡಾವಾರು ಅಂಕಗಳೊಂದಿಗೆ ಬಾಂಗ್ಲಾದೇಶ ಐದನೇ ಸ್ಥಾನ, ಅಂಕಪಟ್ಟಿಯಲ್ಲಿ ಖಾತೆಯನ್ನೇ ತೆರೆಯದ ವೆಸ್ಟ್ ಇಂಡೀಸ್ 6ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಜೊತೆಯಲ್ಲೇ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 205-2027ರ ಸರಣಿಯಲ್ಲಿ ಮೊದಲ ಪಂದ್ಯವಾಡಿಲ್ಲ. ಹೀಗಾಗಿ ಅವೂ ಕೂಡ ಅಂತಿಮ ಸ್ಥಾನಗಳಲ್ಲಿವೆ.
ಅಂದಹಾಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 9 ತಂಡಗಳು ಕಣಕ್ಕಿಳಿಯುತ್ತಿವೆ. 2025 ರಿಂದ 2027 ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಅತ್ಯಧಿಕ ಶೇಕಡಾವಾರು ಅಂಕಗಳನ್ನು ಪಡೆಯುವ ಮೊದಲೆರಡು ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
Advertisement