
ಜೂನ್ 3ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ (PPBKS) ವಿರುದ್ಧ ಜಯ ಸಾಧಿಸುವ ಮೂಲಕ, ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಔಟ್ ಆದ ರೀತಿಯನ್ನು ಭಾರತದ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಟೀಕಿಸಿದ್ದಾರೆ.
ಮಂಗಳವಾರ ನಡೆದ ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿತು. ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಂಜಾಬ್ ತಂಡಕ್ಕೆ ಪಂದ್ಯದ ಗತಿಯನ್ನೇ ಬದಲಿಸುವ ಕ್ಷಣವಾಗಿತ್ತು. ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು.
ಶ್ರೇಯಸ್ ಅಯ್ಯರ್ ಅವರ ಔಟ್ ಬಗ್ಗೆ ಮಾತನಾಡಿದ ಯೋಗರಾಜ್ ಸಿಂಗ್, 'ನನ್ನ ಪ್ರಕಾರ, ಫೈನಲ್‌ನಲ್ಲಿ ಶ್ರೇಯಸ್ ಅಯ್ಯರ್ ಆಡಿದ ಶಾಟ್ ಕ್ರಿಮಿನಲ್ ಅಪರಾಧವಾಗಿತ್ತು. ಅಶೋಕ್ ಮಂಕಡ್ ಸೆಕ್ಷನ್ 302ರ ಅಡಿಯಲ್ಲಿ ಬರುವ ಈ ಕ್ರಿಮಿನಲ್ ಅಪರಾಧದ ಬಗ್ಗೆ ನನಗೆ ಹೇಳಿದರು. ಇದರ ಪರಿಣಾಮವೆಂದರೆ, ನಿಮ್ಮನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗುವುದು ಎಂದು ಅವರು ನನಗೆ ಹೇಳಿದರು. ಶ್ರೇಯಸ್ ನಿನ್ನೆ ಮಾಡಿದ್ದು ಸ್ವೀಕಾರಾರ್ಹವಲ್ಲ. ಅದಕ್ಕಾಗಿ ಕ್ಷಮೆಯಾಚಿಸಬೇಕಾಗಿಲ್ಲ' ಎಂದು ಹೇಳಿದರು.
ಪಿಬಿಕೆಎಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ (35 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 43), ನಾಯಕ ರಜತ್ ಪಾಟೀದಾರ್ (16 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 26), ಜಿತೇಶ್ ಶರ್ಮಾ (10 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 24) ಮತ್ತು ಲಿಯಾಮ್ ಲಿವಿಂಗ್‌ಸ್ಟನ್ (15 ಎಸೆತಗಳಲ್ಲಿ 25) ತಂಡಕ್ಕೆ ನೆರವಾದರು. ಈ ಮೂಲಕ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಅರ್ಶದೀಪ್ ಸಿಂಗ್ (3/40) ಮತ್ತು ಕೈಲ್ ಜೇಮಿಸನ್ (3/48) ಸಮಯೋಚಿತ ಬೌಲಿಂಗ್ ಪ್ರದರ್ಶನ ನೀಡಿದರು. ಯುಜ್ವೇಂದ್ರ ಚಾಹಲ್ ಕೂಡ ಒಂದು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು.
ಆರ್‌ಸಿಬಿ ನೀಡಿದ 191 ರನ್ ಗುರಿ ಬೆನ್ನತ್ತಿದ ಪಂಜಾಬ್ ತಂಡ ಏಳು ವಿಕೆಟ್ ನಷ್ಟಕ್ಕೆ 184 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಸೋಲೊಪ್ಪಿಕೊಂಡಿತು. ಅಸಾಧಾರಣ ಬೌಲಿಂಗ್ ಪ್ರದರ್ಶನಕ್ಕಾಗಿ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Advertisement