
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಕಾಲ್ತುಳಿತದಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಮಾರ್ಗಸೂಚಿಗಳನ್ನು ರೂಪಿಸಲು ಬಿಸಿಸಿಐ ಶನಿವಾರ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ಮೂವರ ಸದಸ್ಯರ ಸಮಿತಿಯನ್ನು ರಚಿಸಿದೆ.
ಸೈಕಿಯಾ ಅಲ್ಲದೇ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಪ್ರಭತೇಜ್ ಸಿಂಗ್ ಭಾಟಿಯಾ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಇದು 15 ದಿನಗಳಲ್ಲಿ ಮಾರ್ಗಸೂಚಿಗಳನ್ನು ರೂಪಿಸುತ್ತದೆ.
ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಘಟನೆ ತಡೆಯುವ ಉದ್ದೇಶದಿಂದ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಉನ್ನತ ಸಮಿತಿ (Apex Council) ನಿರ್ಧರಿಸಿದೆ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಜೂನ್ 4 ರಂದು ಆರ್‌ಸಿಬಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಸುಮಾರು 2.5 ಲಕ್ಷ ಜನರು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದಾಗ ಉಂಟಾದ ಕಾಲ್ತುಳಿತದಿಂದಾಗಿ 11 ಅಭಿಮಾನಿಗಳು ಸಾವನ್ನಪ್ಪಿದರು ಮತ್ತು 56 ಮಂದಿ ಗಾಯಗೊಂಡಿದ್ದರು.
ಆರ್‌ಸಿಬಿ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ FIR ದಾಖಲಾಗಿರುವುದರಿಂದ ಕರ್ನಾಟಕ ಹೈಕೋರ್ಟ್ ಈ ವಿಷಯದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದೆ.
Advertisement