
ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ 'Ball Tampering' ಗಂಭೀರ ಆರೋಪವೊಂದು ಕೇಳಿಬಂದಿದ್ದು, ಪ್ರಮುಖವಾಗಿ ಟೀಂ ಇಂಡಿಯಾ ಮಾಜಿ ಸ್ಟಾರ್ ಸ್ಪಿನ್ನರ್ R Ashwin ಚೆಂಡು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ತಮಿಳುನಾಡು ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಪ್ರಮುಖವಾಗಿ ಈ ಟೂರ್ನಿಯ ಕೇಂದ್ರ ಬಿಂದು ಹಾಗೂ ದಿಂಡಿಗಲ್ ಡ್ರಾಗನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಆಶ್ವಿನ್ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೂನ್ 14 ರಂದು ನಡೆದ ಪಂದ್ಯದ ಸಮಯದಲ್ಲಿ ಅಶ್ವಿನ್ ಮತ್ತು ಅವರ ಫ್ರಾಂಚೈಸಿ ಚೆಂಡು ವಿರೂಪಗೊಳಿಸಿದ್ದಾರೆ ಎಂದು ದೂರು ನೀಡಲಾಗಿದೆ. ಅಚ್ಚರಿ ಎಂದರೆ ಆರ್ ಅಶ್ವಿನ್ ಚೆಂಡು ವಿರೂಪಗೊಳಿಸಿದ್ದು, ಅವರ ನೇತೃತ್ವದ ದಿಂಡಿಗಲ್ ಡ್ರಾಗನ್ಸ್ ತಂಡದ ಫ್ರಾಂಚೈಸಿ ಕಳ್ಳಾಟ ಆಡಿದೆ ಎಂದು ಆರೋಪಿಸಿ ಮಧುರೈ ಪ್ಯಾಂಥರ್ಸ್ ಅಧಿಕೃತ ದೂರು ದಾಖಲಿಸಿದೆ.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ.. ಅಂತೆಯೇ ಪರಸ್ಪರ ಎದುರಾಳಿಗಳು ಆರೋಪ-ಪ್ರತ್ಯಾರೋಪ ಮಾಡುವುದೂ ಸಾಮಾನ್ಯ.. ಆದರೆ ಕ್ರಿಕೆಟ್ ಫ್ರಾಂಚೈಸಿ ಲೀಗ್ ನಲ್ಲಿ ತಂಡವೊಂದು ತನ್ನ ಎದುರಾಳಿ ತಂಡದ ವಿರುದ್ಧ ಕಳ್ಳಾಟ ಆರೋಪ ಹೊರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಇನ್ನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ TNPL ಸಂಘಟಕರು ಈಗ ಈ ವಿಷಯದಲ್ಲಿ ಮಧುರೈ ಪ್ಯಾಂಥರ್ಸ್‌ನಿಂದ ಪುರಾವೆಗಳನ್ನು ಕೇಳಿದ್ದಾರೆ.
ಚೆಂಡು ಭಾರಗೊಳಿಸಲು ರಾಸಾಯನಿಕ ಬಳಕೆ
ಇನ್ನು ಮಧುರೈ ಪ್ಯಾಂಥರ್ಸ್ ನೀಡಿರುವ ಅಧಿಕೃತ ದೂರಿನಲ್ಲಿ, ದಿಂಡಿಗಲ್ ಡ್ರಾಗನ್ಸ್ ಚೆಂಡನ್ನು ಭಾರವಾಗಿಸಲು ರಾಸಾಯನಿಕವಾಗಿ ಸಂಸ್ಕರಿಸಿದ ಟವೆಲ್‌ಗಳನ್ನು ಬಳಸಿದೆ. ಟ್ಯಾಂಪರಿಂಗ್‌ನಿಂದಾಗಿ ಚೆಂಡು ಹೊಡೆದಾಗ ಲೋಹೀಯ ಶಬ್ದವನ್ನು ಉಂಟುಮಾಡಿದೆ ಎಂದು ಆರೋಪಿಸಿದೆ.
ಆಯೋಜಕರು ಹೇಳಿದ್ದೇನು?
ಆರ್ ಅಶ್ವಿನ್ ಮತ್ತು ಅವರ ದಿಂಡಿಗಲ್ ಡ್ರಾಗನ್ಸ್ ತಂಡದ ವಿರುದ್ಧ ದೂರು ದಾಖಲಾಗಿರುವುದನ್ನು ಒಪ್ಪಿಕೊಂಡಿರುವ TNPL ಸಿಇಒ ಪ್ರಸನ್ನ ಕಣ್ಣನ್ ಅವರು, ದೂರುದಾರರಿಂದ ಪುರಾವೆ ಕೇಳಲಾಗಿದೆ ಎಂದು ಹೇಳಿದ್ದಾರೆ. 'ಅವರು ದೂರು ದಾಖಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಿಯಮದಂತೆ ಪಂದ್ಯ ನಡೆದ 24 ಗಂಟೆಗಳ ಒಳಗೆ ಅವರು ದೂರುಗಳನ್ನು ಸಲ್ಲಿಸಬೇಕು. ಆದಾಗ್ಯೂ ನಾವು ಅವರ ದೂರನ್ನು ಒಪ್ಪಿಕೊಂಡಿದ್ದೇವೆ. ಅಂತೆಯೇ ಅವರ ದೂರಿಗೆ ಪುರಾವೆಗಳನ್ನು ಒದಗಿಸುವಂತೆ ಕೇಳಿದ್ದೇವೆ. ಅವರ ಆರೋಪಗಳಲ್ಲಿ ಯಾವುದೇ ಸತ್ಯ ಕಂಡುಬಂದರೆ ನಾವು ಕ್ರಮ ಕೈಗೊಳ್ಳಲು ಸ್ವತಂತ್ರ ಸಮಿತಿಯನ್ನು ರಚಿಸುತ್ತೇವೆ ಎಂದು ಹೇಳಿದರು.
ಅಂತೆಯೇ ಸಾಕಷ್ಟು ಪುರಾವೆಗಳಿಲ್ಲದೆ, ಆಟಗಾರ ಮತ್ತು ಇನ್ನೊಬ್ಬ ಫ್ರಾಂಚೈಸಿ ವಿರುದ್ಧ ಅಂತಹ ಆರೋಪಗಳನ್ನು ಮಂಡಿಸುವುದು ತಪ್ಪು. ಅವರು ಯಾವುದೇ ಪುರಾವೆಗಳನ್ನು ಒದಗಿಸದಿದ್ದರೆ, ಮಧುರೈ ತಂಡ ಮತ್ತು ಫ್ರಾಂಚೈಸಿ ಸೂಕ್ತ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಸನ್ನ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಮೊದಲೇ ಪತ್ರ ಬರೆದಿದ್ದ ಮಧುರೈ ಪ್ಯಾಂಥರ್ಸ್
ಇನ್ನು ಈ ಹಿಂದೆ, ಮಧುರೈ ಪ್ಯಾಂಥರ್ಸ್ ಸಿಒಒ ಎಸ್ ಮಹೇಶ್ ಈ ಘಟನೆಯ ಬಗ್ಗೆ ಟಿಎನ್‌ಪಿಎಲ್ ಅಧಿಕಾರಿಗಳಿಗೆ ವಿವರವಾದ ಪತ್ರ ಬರೆದು, ಹಲವು ಎಚ್ಚರಿಕೆಗಳ ಹೊರತಾಗಿಯೂ, ದಿಂಡಿಗಲ್ ಡ್ರಾಗನ್ಸ್ ಚೆಂಡನ್ನು ವಿರೂಪಗೊಳಿಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದ್ದರು.
'ಇತ್ತೀಚಿನ ದಿಂಡಿಗಲ್ ಡ್ರಾಗನ್ಸ್ ವಿರುದ್ಧದ ನಮ್ಮ ಪಂದ್ಯದ ಸಮಯದಲ್ಲಿ ಚೆಂಡು ವಿರೂಪಗೊಳಿಸುವಿಕೆಯ ಗಂಭೀರ ಪ್ರಕರಣ ಸಂಭವಿಸಿದೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ, ದಿಂಡಿಗಲ್ ತಂಡವು ರಾಸಾಯನಿಕಗಳಿಂದ ಸಂಸ್ಕರಿಸಿದಂತೆ ಕಾಣುವ ಟವೆಲ್‌ಗಳನ್ನು ಬಳಸಿ ಚೆಂಡನ್ನು ಸ್ಪಷ್ಟವಾಗಿ ವಿರೂಪಗೊಳಿಸಿದೆ" ಎಂದು ಮಹೇಶ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಮೈದಾನದ ಹೊರಾಂಗಣದಲ್ಲಿ ತೇವವಿರುವ ಪರಿಸ್ಥಿತಿಯಿಂದಾಗಿ, ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಪ್ರತಿ ಫ್ರಾಂಚೈಸಿಗೆ ಚೆಂಡನ್ನು ಒಣಗಿಸಲು ಟವೆಲ್‌ಗಳನ್ನು ಒದಗಿಸುತ್ತದೆ. ಆದರೆ ಅವುಗಳನ್ನು ಮೈದಾನದ ಅಂಪೈರ್‌ಗಳ ಮುಂದೆ ಮಾತ್ರ ಬಳಸಬೇಕು. ಅವರು ಟಿಎನ್‌ಪಿಎಲ್ ಒದಗಿಸಿದ ಟವೆಲ್‌ಗಳನ್ನು ಬಳಸಿ ಮಾತ್ರ ಚೆಂಡನ್ನು ಒಣಗಿಸಬೇಕು. ಮತ್ತು ಪ್ರತಿ ಬಾರಿ ಚೆಂಡನ್ನು ಸಿಕ್ಸರ್‌ಗೆ ಹೊಡೆದಾಗ ಅಥವಾ ಔಟ್ ಆದ ತಕ್ಷಣ ಮತ್ತು ಓವರ್-ಬ್ರೇಕ್ ಆದ ತಕ್ಷಣ, ಅಂಪೈರ್‌ಗಳು ನಿಯಮಿತವಾಗಿ ಚೆಂಡನ್ನು ಪರಿಶೀಲಿಸುತ್ತಾರೆ ಮತ್ತು ಆ ಪಂದ್ಯದ ಸಮಯದಲ್ಲಿ ಅವರಿಗೆ ಚೆಂಡಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಕಣ್ಣನ್ ಹೇಳಿದರು.
Advertisement