
ಲೀಡ್ಸ್: ಶುಕ್ರವಾರದಿಂದ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಭಾರತ ತಂಡದ ನಾಯಕ ಶುಭಮನ್ ಗಿಲ್ ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ 4ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತಿತ್ತು. ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. ಗಿಲ್ ಅವರೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ದೃಢಪಡಿಸಿದರು.
3ನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದರ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ ನಂ. 4 ಮತ್ತು 5 ನಿರ್ಧರಿಸಲಾಗಿದೆ. ಗಿಲ್ ನಂ. 4 ರಲ್ಲಿ ಬ್ಯಾಟ್ ಮಾಡುತ್ತಾರೆ. ನಾನು ಸದ್ಯಕ್ಕೆ ನಂ. 5 ಗೆ ಅಂಟಿಕೊಳ್ಳುತ್ತೇನೆ. ಉಳಿದವರ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿಯಂತಹ ಶ್ರೇಷ್ಟ ಆಟಗಾರರು 4ನೇ ಕ್ರಮಾಂಕದಲ್ಲಿ ಆಡಿದ್ದರು. ಈಗ ಗಿಲ್ ಆ ಜಾಗಕ್ಕೆ ಕಾಲಿಡುತ್ತಿರುವುದು ಭಾರತದ ಟೆಸ್ಟ್ ಕ್ರಿಕೆಟ್ ನಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಆರಂಭಿಕ ಆಟಗಾರನಾಗಿ ಯಶಸ್ಸು ಕಾಣದೇ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಗಿಲ್ ಈಗ ಅತ್ಯಂತ ಪ್ರಮುಖವಾದದ್ದು ಎಂದು ಪರಗಣಿಸಲಾದ 4ನೇ ಕ್ರಮಾಂಕದಲ್ಲಿ ಆಡಲು ಸಿದ್ಧರಾಗಿದ್ದಾರೆ.
3ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ತ್ರಿಶತಕಗಳಿಂದ ಹೆಸರಾಗಿರುವ ಕರುಣ್ ನಾಯರ್ ಅಥವಾ ಉದಯೋನ್ಮುಖ ತಾರೆ ಬಿ ಸಾಯಿ ಸುದರ್ಶನ್ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.
Advertisement