
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರಿಗೆ ಚೊಚ್ಚಲ ಪ್ರವೇಶವೇ ನಿರಾಶಾದಾಯಕವಾಗಿದೆ. ಕರುಣ್ ನಾಯರ್ ಉತ್ತಮ ಫಾರ್ಮ್‌ನಲ್ಲಿರುವ ಕಾರಣ 23 ವರ್ಷದ ಸುದರ್ಶನ್ ಅವರಿಗೆ ಪ್ಲೇಯಿಂಗ್ XI ನಲ್ಲಿ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಈಗಾಗಲೇ ಸಂದೇಹವಿತ್ತು. ಆದರೆ ತಂಡದ ಆಡಳಿತ ಮಂಡಳಿ ಸಾಯಿ ಮೇಲೆ ವಿಶ್ವಾಸ ಹೊಂದಿದ್ದು ಅವರಿಗೆ ಟೆಸ್ಟ್ ಕ್ಯಾಪ್ ನೀಡಲಾಯಿತು.
ಕರುಣ್ ನಾಯರ್ ಅವರಿಗೆ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಅವಕಾಶ ನೀಡಲಾಗಿದೆ. ಭಾರತ ಮೊದಲು ಬ್ಯಾಟಿಂಗ್ ಪ್ರಾರಂಭಿಸಿದ್ದು ಆರಂಭಿಕ ಜೋಡಿ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭವನ್ನು ನೀಡಿದರು. ಇಬ್ಬರೂ ಒಟ್ಟಾಗಿ ಮೊದಲ ವಿಕೆಟ್‌ಗೆ 91 ರನ್ ಸೇರಿಸಿದರು. ಆದರೆ ರಾಹುಲ್ ಊಟದ ಮೊದಲು 42 ರನ್‌ಗಳಿಗೆ ಔಟಾದರು.
ರಾಹುಲ್ ಔಟಾದ ನಂತರ ಬಂದ ಸಾಯಿ ಸುದರ್ಶನ್ ಗೆ ಟೆಸ್ಟ್ ವೃತ್ತಿಜೀವನವು ಉತ್ತಮವಾಗಿ ಪ್ರಾರಂಭವಾಗಲಿಲ್ಲ. ಅವರು ಮೊದಲ ಎಸೆತದಲ್ಲೇ ಬಹುತೇಕ ಔಟಾಗಿದ್ದರು. ಆದರೆ ಅದೃಷ್ಟ ಅವರಿಗೆ ಅನುಕೂಲಕರವಾಗಿತ್ತು. ಆದರೆ, ಅದೃಷ್ಟ ಅವರಿಗೆ ಹೆಚ್ಚು ಸಮಯದವರಗೆ ಉಳಿಯಲಿಲ್ಲ. ಮುಂದಿನ ಓವರ್‌ನಲ್ಲಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಓವರ್ ನಲ್ಲಿ ಕ್ಯಾಚ್ ನೀಡಿ ಔಟಾದರು. ಸಾಯಿ ಖಾತೆ ತೆರೆಯದೆಯೇ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ, ಸಾಯಿ ಸುದರ್ಶನ್ 14 ವರ್ಷಗಳಲ್ಲಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
2010ರ ಆರಂಭದಲ್ಲಿ ವೃದ್ಧಿಮಾನ್ ಸಹಾ ದಕ್ಷಿಣ ಆಫ್ರಿಕಾ ವಿರುದ್ಧದ ನಾಗ್ಪುರ ಟೆಸ್ಟ್‌ನಲ್ಲಿ ರನ್ ಗಳಿಸದೆಯೇ ಔಟಾದರು. ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ಕೂಡ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಅವರನ್ನು ಬ್ಯಾಟ್ಸ್‌ಮನ್‌ಗಳೆಂದು ಪರಿಗಣಿಸಲಾಗಿಲ್ಲ. ಸಾಯಿ ಸುದರ್ಶನ್ ಔಟಾದ ತಕ್ಷಣ, ಅಂಪೈರ್ ಊಟದ ಸಮಯವನ್ನು ಘೋಷಿಸಿದರು. ಆಗ ಭಾರತದ ಸ್ಕೋರ್ 2 ವಿಕೆಟ್‌ಗಳಿಗೆ 92 ರನ್ ಆಗಿತ್ತು.
ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದ ಟೀಮ್ ಇಂಡಿಯಾಕ್ಕೆ ಇದು ಖಂಡಿತವಾಗಿಯೂ ಆಘಾತಕಾರಿಯಾಗಿತ್ತು. ಮುಂದಿನ ಇನ್ನಿಂಗ್ಸ್‌ನಲ್ಲಿ ಸಾಯಿ ಮತ್ತೆ ಅವಕಾಶ ಪಡೆಯುತ್ತಾರೋ ಅಥವಾ ಕರುಣ್ ನಾಯರ್ ಅವರನ್ನು ಮೇಲಕ್ಕೆ ಕಳುಹಿಸುತ್ತಾರೋ ಎಂದು ಈಗ ಕಾದು ನೋಡಬೇಕಾಗಿದೆ.
Advertisement