
ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಾಗಿ ಹೊಸ ನಿಯಮಗಳನ್ನು ಐಸಿಸಿ ಅನುಮೋದಿಸಿದ್ದು, ಆಟದ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಕೆಲವೊಂದು ನಿಯಮಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (2025-27) ಟೂರ್ನಿಯ ಆರಂಭದಲ್ಲಿಯೇ ಜಾರಿಗೆ ತರಲಾಗಿದ್ದು, ವೈಟ್ ಬಾಲ್ ಕ್ರಿಕೆಟ್ ನ ಹೊಸ ನಿಯಮಗಳು ಜುಲೈ 2 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ Stop Clock ಕಡ್ಡಾಯ: ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ Stop Clock ನಿಯಮ ಪರಿಚಯಿಸಿದ ಒಂದು ವರ್ಷದ ನಂತರ ಇದನ್ನು ಟೆಸ್ಟ್ ಕ್ರಿಕೆಟ್ ನಲ್ಲೂ ಪರಿಚಯಿಸಲು ICC ನಿರ್ಧರಿಸಿದೆ. ಟೆಸ್ಟ್‌ಗಳಲ್ಲಿ ನಿಧಾನಗತಿಯ ಓವರ್ ರೇಟ್ ಒಂದು ದೊಡ್ಡ ಸಮಸ್ಯೆಯಾಗಿದೆ. ಈಗ ಹೊಸ ಐಸಿಸಿ ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುವ ತಂಡ ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಇದು ಸಾಧ್ಯವಾಗದಿದ್ದರೆ, ತಂಡಕ್ಕೆ ಅಂಪೈರ್‌ನಿಂದ ಎರಡು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಇದರ ನಂತರವೂ ಬೌಲಿಂಗ್ ತಂಡ ನಿಧಾನ ಮಾಡಿದರೆ, ಪ್ರತಿ ಬಾರಿಯೂ ಐದು ರನ್‌ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. 80 ಓವರ್‌ಗಳ ನಂತರ ಎಚ್ಚರಿಕೆಗಳನ್ನು ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭದಿಂದಲೂ ಈಗಾಗಲೇ ಅನ್ವಯವಾಗುತ್ತಿದೆ.
ಶಾರ್ಟ್ ರನ್ಗೆ ದಂಡ: ಶಾರ್ಟ್ ರನ್ ಗೆ ಸಂಬಂಧಿಸಿದಂತೆ ICC ಹೊಸ ನಿಯಮವನ್ನು ಪರಿಚಯಿಸಿದೆ. ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಕದಿಯಲು ವಿಫಲವಾದರೆ (ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್‌ಮನ್ ಎರಡನೇ ರನ್ ಕದಿಯುವ ಯತ್ನದಲ್ಲಿ ನಾನ್ ಸ್ಟ್ರೈಕ್ ತುದಿಯನ್ನು ಮುಟ್ಟದೆ ವಾಪಸ್ ಆಗಿದ್ದರೆ) ಮುಂದಿನ ಎಸೆತವನ್ನು ಯಾರು ಎದುರಿಸಬಹುದು ಎಂಬುದನ್ನು ಫೀಲ್ಡಿಂಗ್ ತಂಡ ಆಯ್ಕೆ ಮಾಡಬಹುದು. ಇದಲ್ಲದೆ, ಶಾರ್ಟ್ ರನ್ ಮಾಡಿದ ಬ್ಯಾಟ್ಸ್‌ಮನ್ ತಂಡಕ್ಕೆ ಐದು ರನ್ಗಳ ದಂಡ ವಿಧಿಸಲಾಗುತ್ತದೆ.
ಕ್ಯಾಚ್‌ಗಳಿಗೆ ಸಂಬಂಧಿಸಿದ ಹೊಸ ನಿಯಮ: ಕ್ಯಾಚ್‌ಗಳಿಗೆ ಸಂಬಂಧಿಸಿದಂತೆ ನ್ಯಾಯವನ್ನು ಎತ್ತಿಹಿಡಿಯಲು ಐಸಿಸಿ ಒಂದು ದೊಡ್ಡ ಬದಲಾವಣೆ ಮಾಡಿದೆ. ಪ್ರಸ್ತುತ ಫೀಲ್ಡ್ ಅಂಪೈರ್‌ಗಳಿಗೆ ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲದಿದ್ದಾಗ ಟಿವಿ ಅಂಪೈರ್ ಮೊರೆ ಹೋಗುತ್ತಿದ್ದರು. ಟಿವಿ ಅಂಪೈರ್ ಇದನ್ನು ನೋಬಾಲ್ ಅಂತಾ ಪರಿಗಣಿಸಿದಾಗ ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಸಿಗುತ್ತಿತ್ತು ಮತ್ತು ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ, ಈಗ ಮೂರನೇ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುತ್ತಾರೆ. ಕ್ಯಾಚ್ ಸರಿಯಾಗಿದ್ದರೆ, ಬ್ಯಾಟಿಂಗ್ ತಂಡವು ನೋ-ಬಾಲ್‌ಗೆ ಕೇವಲ ಒಂದು ಹೆಚ್ಚುವರಿ ರನ್ ಮಾತ್ರ ಪಡೆಯುತ್ತದೆ. ಆದರೆ ಕ್ಯಾಚ್ ಪೂರ್ಣಗೊಂಡಿಲ್ಲದಿದ್ದರೆ, ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ರನ್ಗಾಗಿ ಓಡಿದ್ದರೆ, ಆಗ ನೋ ಬಾಲ್ ಜೊತೆಗೆ ಬ್ಯಾಟ್ಸ್‌ಮನ್‌ಗಳು ಎಷ್ಟು ರನ್‌ಗಳನ್ನು ಓಡಿರುತ್ತಾರೋ ಅಷ್ಟು ರನ್‌ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.
ಲಾಲಾರಸ ಹಚ್ಚಿದ ಚೆಂಡು ಬದಲಾವಣೆ ಕಡ್ಡಾಯವಲ್ಲ: ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಲಾಲಾರಸ ಹಚ್ಚುವ ನಿಷೇಧ ಮುಂದುವರಿಯಲಿದೆ. ಚೆಂಡಿನ ಮೇಲೆ ಲಾಲಾರಸ ಬಿದ್ದರೆ ಅಂಪೈರ್‌ಗಳು ಕೂಡಲೇ ಅದನ್ನು ಬದಲಾಯಿಸುವುದು ಕಡ್ಡಾಯವಲ್ಲ ಎಂದು ಐಸಿಸಿ ಹೇಳಿದೆ. ಚೆಂಡಿನ ಮೇಲೆ ಲಾಲಾರಸ ಹಚ್ಚುವುದನ್ನು ತಡೆಯುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಚೆಂಡು ಸಂಪೂರ್ಣವಾಗಿ ಒದ್ದೆಯಾಗಿ ಕಂಡುಬಂದಾಗ ಅಥವಾ ಹಾನಿಗೊಳಗಾದಾಗ ಮಾತ್ರ ಅದನ್ನು ಬದಲಾಯಿಸಲಾಗುತ್ತದೆ. ಚೆಂಡನ್ನು ಬದಲಾಯಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅಂಪೈರ್‌ಗಳ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಅಂಪೈರ್‌ಗಳಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ.
DRS ಶಿಷ್ಟಾಚಾರದಲ್ಲಿ ಬದಲಾವಣೆ: ಐಸಿಸಿ DRS ಪ್ರೋಟೋಕಾಲ್‌ನಲ್ಲಿಯೂ ದೊಡ್ಡ ಬದಲಾವಣೆಯನ್ನು ಮಾಡಿದೆ. ಒಬ್ಬ ಬ್ಯಾಟ್ಸ್‌ಮನ್‌ಗೆ ಕ್ಯಾಚ್ ಔಟ್ ನೀಡಿದರೆ ಆತ ರಿವ್ಯೂ ಕೇಳುತ್ತಾನೆ ಎಂದು ಭಾವಿಸೋಣ. ಅಲ್ಟ್ರಾಎಡ್ಜ್‌ನಲ್ಲಿ ಚೆಂಡು ಬ್ಯಾಟ್ ಅನ್ನು ತಾಗದೆ ಪ್ಯಾಡ್‌ಗೆ ತಗುಲಿದೆ ಎಂದು ತೋರಿಸುತ್ತದೆ. ಕ್ಯಾಚ್ ಔಟ್ ಎಂದು ಘೋಷಿಸಿದ ನಂತರ, ಟಿವಿ ಅಂಪೈರ್ ಈಗ ಮತ್ತೊಂದು ಔಟ್ ಮೋಡ್ ಅನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಬ್ಯಾಟರ್ ಎಲ್‌ಬಿಡಬ್ಲ್ಯೂ ಆಗಿದೆಯೇ ಎಂಬುದನ್ನು ತಿಳಿಯಲು ಬಾಲ್-ಟ್ರ್ಯಾಕಿಂಗ್ ಗ್ರಾಫಿಕ್ ಕೇಳುತ್ತಾರೆ. ಇಲ್ಲಿಯವರೆಗೂ ಕ್ಯಾಚ್ ಔಟ್ ಆಗದಿದ್ದರೆ, ಎಲ್‌ಬಿಡಬ್ಲ್ಯೂಗೆ ಡೀಫಾಲ್ಟ್ ನಿರ್ಧಾರವು ' ನಾಟ್ ಔಟ್' ಆಗಿತ್ತು. ಆದರೆ ಹೊಸ ನಿಯಮದಲ್ಲಿ ಬ್ಯಾಟ್ಸ್‌ಮನ್ OUT ಎಂದು ಕಂಡುಬಂದರೆ ಆತ ಮೈದಾನದಿಂದ ನಿರ್ಗಮಿಸಬೇಕಾಗುತ್ತದೆ.
Advertisement