
ಮುಂಬೈ: ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, stop clock ನಿಯಮವನ್ನು ಜಾರಿಗೆ ತಂದಿದ್ದು, ನಿಯಮ ಮೀರಿದರೆ ಪ್ರತೀ ಓವರ್ ಗೆ 5 ರನ್ ದಂಡ ವಿಧಿಸಲಿದೆ.
ಹೌದು.. ಪುರುಷರ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಬೌಲಿಂಗ್ ತಂಡಗಳಿಗೆ ಬೌಲರ್ ಇನ್ನಿಂಗ್ಸ್ನಲ್ಲಿ ಮೂರನೇ ಬಾರಿಗೆ ಮುಂದಿನ ಓವರ್ ಎಸೆಯುವ ನಡುವಿನ ಸಮಯ 60 ಸೆಕೆಂಡುಗಳ ಮಿತಿ (Stop Clock) ಮೀರಿದರೆ ಐದು ರನ್ ದಂಡ ವಿಧಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ICC ಮಂಗಳವಾರ ತಿಳಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದನ್ನು ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಬಳಸಲಾಗುವುದು ಎಂದು ಹೇಳಿದೆ.
ಡಿಸೆಂಬರ್ 2023ರಿಂದ ಏಪ್ರಿಲ್ 2024 ರವರೆಗೆ ಪುರುಷರ ಏಕದಿನ ಮತ್ತು ಟಿ 20 ಐ ಕ್ರಿಕೆಟ್ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸ್ಟಾಪ್ ಕ್ಲಾಕ್ (stop clock rule)ವನ್ನು ಪರಿಚಯಿಸಲು ಸಿಇಸಿ ಒಪ್ಪಿಕೊಂಡಿದೆ. ಓವರ್ ಗಳ ನಡುವೆ ತೆಗೆದುಕೊಳ್ಳುವ ಸಮಯವನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲಾಗುತ್ತದೆ. “ಹಿಂದಿನ ಓವರ್ ಮುಗಿದ 60 ಸೆಕೆಂಡುಗಳಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಎಸೆಯಲು ಸಿದ್ಧರಿಲ್ಲದಿದ್ದರೆ, ಇನ್ನಿಂಗ್ಸ್ನಲ್ಲಿ ಇದೇ ಮಾದರಿಯಲ್ಲಿ ಮೂರನೇ ಬಾರಿಗೆ ವಿಳಂಬ ಮಾಡಿದರೆ 5 ರನ್ ದಂಡ ವಿಧಿಸಲಾಗುವುದು” ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಲಿಂಗ ಬದಲಾವಣೆ ಸದಸ್ಯರ ನಿಯಮದ ಸ್ಪಷ್ಟನೆ
ಮಹಿಳಾ ಕ್ರಿಕೆಟ್ಗೆ ನೂತನ ಲಿಂಗ ಅರ್ಹತಾ ನಿಯಂತ್ರಣವನ್ನು (gender eligibility regulation) ಮಂಡಳಿಯು ಅನುಮೋದಿಸಿದ್ದು, ಇದರ ಪ್ರಕಾರ ಪುರುಷ ಪ್ರೌಢಾವಸ್ಥೆಗೆ ಒಳಗಾದ ಬಳಿಕ ಲಿಂಗ ಬದಲಾವಣೆ ಮಾಡಿಕೊಂಡರೆ ಆತ ಅಂತಾರಾಷ್ಟ್ರೀಯ ಮಹಿಳಾ ಆಟದಲ್ಲಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ. ದೇಶೀಯ ಮಟ್ಟದಲ್ಲಿ, ಈ ನಿಬಂಧನೆಗಳು ವೈಯಕ್ತಿಕ ಸದಸ್ಯ ಮಂಡಳಿಗಳ ವ್ಯಾಪ್ತಿಯಲ್ಲಿ ಉಳಿಯುತ್ತವೆ.
ಸಮಾನ ವೇತನ
ಇನ್ನು ಕ್ರಿಕೆಟ್ ಪಂದ್ಯಗಳ ಮಹಿಳಾ ಅಧಿಕಾರಿಗಳಿಗೆ ಸಮಾನ ವೇತನ ಘೋಷಿಸಿದ ಐಸಿಸಿ, ಕ್ರಿಕೆಟ್ನಲ್ಲಿ ಲಿಂಗ ಸಮಾನತೆಗೆ ತನ್ನ ಬದ್ಧತೆಯನ್ನು ಸೂಚಿಸಿದೆ. ಐಸಿಸಿ ಅಂಪೈರ್ಗಳು ಪುರುಷರ ಅಥವಾ ಮಹಿಳಾ ಕ್ರಿಕೆಟ್ ಪಂದ್ಯಗಳನ್ನು ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಲೆಕ್ಕಿಸದೆ ಪಂದ್ಯದ ದಿನದ ವೇತನವನ್ನು ಸಮಾನಗೊಳಿಸಿದೆ. 2024ರ ಜನವರಿಯಲ್ಲಿ ಜಾರಿಗೆ ಬರಲಿರುವ ಈ ಉಪಕ್ರಮವು ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ಕ್ಷಣವಾಗಲಿದೆ. ಏಕೆಂದರೆ ಇದು ಕ್ರೀಡೆಯಲ್ಲಿ ಸಮಾನ ಅವಕಾಶಗಳತ್ತ ಮತ್ತೊಂದು ಹೆಜ್ಜೆಯಾಗಿದೆ. ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀರ್ಘಕಾಲದ ಅಭ್ಯಾಸಕ್ಕೆ ಅನುಗುಣವಾಗಿ ಐಸಿಸಿ ಮಹಿಳಾ ಚಾಂಪಿಯನ್ಷಿಪ್ ಪ್ರತಿ ಸರಣಿಯಲ್ಲಿ ಕನಿಷ್ಠ ಒಬ್ಬ ತಟಸ್ಥ ಅಂಪೈರ್ ಅನ್ನು ಸೇರಿಸಲು ಶಿಫಾರಸು ಮಾಡಲಾಗಿದೆ.
ಪಿಚ್ ನಿಷೇಧ ನಿಯಮದಲ್ಲೂ ಬದಲಾವಣೆ
ಇದೇ ವೇಳೆ ಡಿಮೆರಿಟ್ ಅಂಕಗಳನ್ನು ಪಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಪಿಚ್ ಅನ್ನು ನಿಷೇಧಿಸುವ ಪ್ರಕ್ರಿಯೆಯಲ್ಲಿ ಐಸಿಸಿ ಬದಲಾವಣೆ ಮಾಡಿದ್ದು, “ಪಿಚ್ ಮತ್ತು ಔಟ್ಫೀಲ್ಡ್ ಮೇಲ್ವಿಚಾರಣಾ ನಿಯಮಗಳಲ್ಲಿನ ಬದಲಾವಣೆಗಳನ್ನು ಸಹ ಅನುಮೋದಿಸಲಾಗಿದೆ.
ಇದರಲ್ಲಿ ಪಿಚ್ ಅನ್ನು ಮೌಲ್ಯಮಾಪನ ಮಾಡುವ ಮಾನದಂಡಗಳನ್ನು ಸರಳೀಕರಿಸುವುದು ಮತ್ತು ಐದು ವರ್ಷಗಳ ಅವಧಿಯಲ್ಲಿ ಒಂದು ಸ್ಥಳವು ಐದರ ಬದಲು ಆರು ಡಿಮೆರಿಟ್ ಅಂಕಗಳನ್ನು ಪಡೆದರೆ ಮಾತ್ರ ನಿಷೇಧಕ್ಕೆ ಒಳಪಡುಸುವ ಕ್ರಮಕ್ಕೆ ಅನುಮೋದನೆ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.
Advertisement