
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 'ಕ್ಯಾಪ್ಟನ್ ಕೂಲ್' ಎಂಬ ಪದಗುಚ್ಛಕ್ಕೆ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಮೈದಾನದಲ್ಲಿ ಧೋನಿ ಶಾಂತರಾಗಿರುತ್ತಿದ್ದ ಕಾರಣ ಅವರು ಕ್ಯಾಪ್ಟನ್ ಕೂಲ್ ಎಂದೇ ಪ್ರಸಿದ್ಧರಾಗಿದ್ದಾರೆ.
ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿ ಪೋರ್ಟಲ್ ಪ್ರಕಾರ, ಅರ್ಜಿಯ ಸ್ಥಿತಿಯನ್ನು 'ಸ್ವೀಕರಿಸಲಾಗಿದೆ ಮತ್ತು ಜಾಹೀರಾತು ಮಾಡಲಾಗಿದೆ'. ಇದನ್ನು ಜೂನ್ 16 ರಂದು ಅಧಿಕೃತ ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಎಂಎಸ್ ಧೋನಿ ಅರ್ಜಿಯನ್ನು ಜೂನ್ 5 ರಂದು ಸಲ್ಲಿಸಿದ್ದಾರೆ.
ಪ್ರಸ್ತಾವಿತ ಟ್ರೇಡ್‌ಮಾರ್ಕ್ ನ್ನು ಕ್ರೀಡಾ ತರಬೇತಿ, ಕ್ರೀಡಾ ತರಬೇತಿ ಸೌಲಭ್ಯಗಳು, ಕ್ರೀಡಾ ತರಬೇತಿ ಮತ್ತು ಸೇವೆಗಳನ್ನು ಒದಗಿಸುವ ವಿಭಾಗದ ಅಡಿಯಲ್ಲಿ ನೋಂದಾಯಿಸಲಾಗಿದೆ.
ಕುತೂಹಲಕಾರಿಯಾಗಿ, ಮತ್ತೊಂದು ಕಂಪನಿಯಾದ ಪ್ರಭಾ ಸ್ಕಿಲ್ ಸ್ಪೋರ್ಟ್ಸ್ (OPC) ಪ್ರೈವೇಟ್ ಲಿಮಿಟೆಡ್ ಈ ಹಿಂದೆ ಈ ಪದಗುಚ್ಛಕ್ಕೆ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿತ್ತು. ಆದಾಗ್ಯೂ, ಆ ಅರ್ಜಿಯ ಸ್ಥಿತಿ 'ಸರಿಪಡಿಸುವಿಕೆಗೆ ಸಲ್ಲಿಸಲಾಗಿದೆ' ಎಂದು ತಿಳಿದುಬಂದಿದೆ.
ಇನ್ನು ಈ ತಿಂಗಳ ಆರಂಭದಲ್ಲಿ, ಆಸ್ಟ್ರೇಲಿಯಾದ ಶ್ರೇಷ್ಠ ಮ್ಯಾಥ್ಯೂ ಹೇಡನ್ ಮತ್ತು ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಸೇರಿದಂತೆ ಏಳು ಕ್ರಿಕೆಟಿಗರೊಂದಿಗೆ ಧೋನಿಯನ್ನು 2025 ರ ವರ್ಷಕ್ಕೆ ಐಸಿಸಿಯ ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದೆ.
ಐಸಿಸಿ ಧೋನಿ ಅವರನ್ನು ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲದೆ "ಅಸಾಧಾರಣ ಸ್ಥಿರತೆ, ಫಿಟ್ನೆಸ್ ಮತ್ತು ದೀರ್ಘಾವಧಿಯಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರ ಎಂದು ಹಾಲ್ ಆಫ್ ಫೇಮ್ ನಲ್ಲಿ ಶ್ಲಾಘಿಸಲಾಗಿದೆ.
"ಒತ್ತಡದಲ್ಲಿ ಅವರ ಶಾಂತತೆ, ಸಾಟಿಯಿಲ್ಲದ ಯುದ್ಧತಂತ್ರದ ಚತುರತೆ ತೋರಿದ, ಆಟದ ಶ್ರೇಷ್ಠ ಫಿನಿಷರ್‌ಗಳಲ್ಲಿ ಒಬ್ಬರಾದ, ನಾಯಕರು ಮತ್ತು ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಎಂಎಸ್ ಧೋನಿ ಅವರ ಪರಂಪರೆಯನ್ನು ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರಿಸುವ ಮೂಲಕ ಗೌರವಿಸಲಾಗಿದೆ" ಎಂದು ಐಸಿಸಿ ಹೇಳಿಕೆ ತಿಳಿಸಿದೆ.
Advertisement