IND vs NZ: ರವೀಂದ್ರ ಜಡೇಜಾ ವರ್ತನೆಗೆ ಮಾಜಿ ಆಟಗಾರ ಅಸಮಾಧಾನ
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ್ದು, ಇದರ ಸಂಪೂರ್ಣ ಕ್ರೆಡಿಟ್ ಟೀಂ ಇಂಡಿಯಾದ ಸ್ಪಿನ್ ಬೌಲರ್‌ಗಳಿಗೆ ಸಲ್ಲುತ್ತದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ನೆರವಾದರು.
250 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 45.3 ಓವರ್‌ಗಳಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಹಾರ್ದಿಕ್ ಪಾಂಡ್ಯ ಬಿಟ್ಟರೆ ಉಳಿದೆಲ್ಲ ಕಿವೀಸ್ ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿವೆ. ವರುಣ್ ಚಕ್ರವರ್ತಿ ಐದು, ಕುಲದೀಪ್ ಯಾದವ್ ಎರಡು, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. 33ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಟಾಮ್ ಲಾಥಮ್ ಅವರ ವಿಕೆಟ್ ಕಬಳಿಸಿದರು. ಈ ವೇಳೆ ಜಡೇಜಾ ಸಂಭ್ರಮಿಸಿದ ರೀತಿಯು ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಸೈಮನ್ ಡೌಲ್ ಅವರನ್ನು ಕೆರಳಿಸಿದೆ.
ಏಕೈಕ ವಿಕೆಟ್ ಪಡೆದ ಜಡೇಜಾ ಸಂಭ್ರಮಾಚರಣೆ ವೇಳೆ ಪಿಚ್‌ನ ಮಧ್ಯಭಾಗಕ್ಕೆ ಓಡಿಹೋದರು. ಇದರಿಂದ ಕೆರಳಿ ಕೆಂಡವಾದ ಡೌಲ್, 'ಅವರನ್ನು ನೋಡಿ. ಅವರು ಹಾಗೆ ಮಾಡಲು ಅವಕಾಶವಿಲ್ಲ. ಅವರಿಗೆ ಎಚ್ಚರಿಕೆ ನೀಡಬೇಕಿತ್ತು' ಎಂದಿದ್ದಾರೆ. ಸಾಮಾನ್ಯವಾಗಿ ಆಟಗಾರರು ಪಿಚ್ ಮೇಲೆ ಕಾಲಿಟ್ಟರೆ ಎಚ್ಚರಿಕೆ ನೀಡಲಾಗುತ್ತದೆ.
ವರುಣ್ ಚಕ್ರವರ್ತಿ 10 ಓವರ್ ಗಳಲ್ಲಿ 42 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಈ ಮೂಲಕ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದೀಗ ಅವಕಾಶ ಸಿಕ್ಕಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ