
ದುಬೈ: ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿ ಫೈನಲ್ ಪಂದ್ಯದ ಬಳಿಕ ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪಟ್ಟಿ ಪರಿಷ್ಕರಣೆ ಮಾಡಿದ್ದು, ಕಳಪೆ ಫಾರ್ಮ್ ನಿಂದ ಕುಸಿದಿದ್ದ ಭಾರತದ ವಿರಾಟ್ ಕೊಹ್ಲಿ ಪುಟಿದೆದ್ದಿದ್ದಾರೆ.
ಹೌದು.. ನಿರೀಕ್ಷೆಯಂತೆಯೇ ಅಂತಾರಾಷ್ಚ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಹಲವು ಆಟಗಾರರ ಸ್ಥಾನ ಬದಲಾಗಿದೆ. ಪ್ರಮುಖವಾಗಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಪುಟಿದೆದ್ದಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರ ಕುಸಿತ ಅನುಭವಿಸಿದ್ದಾರೆ.
ಬ್ಯಾಟರ್ ಗಳ ಪಟ್ಟಿಯಲ್ಲಿ ಭಾರತದ ಶುಭ್ ಮನ್ ಗಿಲ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, 790 ಅಂಕಗಳೊಂದಿಗೆ ಗಿಲ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. 770 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಆಜಂ ಇದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸನ್ (760 ಅಂಕ) 3ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ತಮ್ಮ ಅಂಕಗಳನ್ನು 747ಕ್ಕೆ ಏರಿಕೆ ಮಾಡಿಕೊಂಡು 4ನೇ ಸ್ಥಾನಕ್ಕೇರಿದ್ದಾರೆ.
ರೋಹಿತ್ ಸ್ಥಾನ ಕುಸಿತ
ಆದರೆ ಈ ಹಿಂದೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಶತಕದ ಮೂಲಕ ಫಾರ್ಮ್ ಗೆ ಮರಳಿದ್ದ ರೋಹಿತ್ ಶರ್ಮಾ ಬಳಿಕ ಮತ್ತೆ ಅಂತಹ ಮಹತ್ತರ ಇನ್ನಿಂಗ್ಸ್ ಆಡಿಲ್ಲ. ಹೀಗಾಗಿ ಅವರು ರ‍್ಯಾಂಕಿಂಗ್ ಪಟ್ಟಿಯಲ್ಲಿ 2 ಸ್ಥಾನ ಕುಸಿತ ಕಂಡಿದ್ದು, 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಂತೆಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಭಾರತ ಶ್ರೇಯಸ್ ಅಯ್ಯರ್ ಒಂದು ಸ್ಥಾನ ಮೇಲೇರಿ 8ನೇ ಸ್ಥಾನಕ್ಕೇರಿದ್ದಾರೆ.
ಆಫ್ಘನ್ ಬ್ಯಾಟರ್ ಸಾಧನೆ
ಈ ಪಟ್ಟಿಯಲ್ಲಿ ಆಫ್ಘಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಝಡ್ರಾನ್ ಮಹತ್ವದ ದಾಖಲೆ ಮಾಡಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಐತಿಹಾಸಿಕ ಶತಕದ ಬೆನ್ನಲ್ಲೇ ಅವರು ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬರೊಬ್ಬರಿ 13 ಸ್ಥಾನ ಮೇಲೆರಿದ್ದಾರೆ. ಅಂತೆಯೇ ಬ್ಯಾಟರ್ ಗಳ ಪಟ್ಟಿಯಲ್ಲಿ ಅಗ್ರ 10ರೊಳಗೆ 10ನೇಯವರಾಗಿ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಬೌಲಿಂಗ್ ನಲ್ಲಿ ಶ್ರೀಲಂಕಾದ ಮಹೀಶ್ ತೀಕ್ಷಣ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 2ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಅಗ್ರ 10ರ ಪಟ್ಟಿಯಲ್ಲಿ ಭಾರತದ ಏಕೈಕ ಬೌಲರ್ ಸ್ಥಾನ ಪಡೆದಿದ್ದು, ಕುಲದೀಪ್ ಯಾದವ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜಾ 9ನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್ಝೈ ಮತ್ತು ಮಹಮದ್ ನಬಿ ಅಗ್ರ 2 ಸ್ಥಾನಗಳಲ್ಲಿದ್ದಾರೆ.
Advertisement