
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಪಿಚ್ ಆಯ್ಕೆಯಾಗಿದ್ದು, ಈ ಪಿಚ್ ಗೂ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿರುವ ಪಾಕಿಸ್ತಾನಕ್ಕೆ ಅವಿನಾಭಾವ ಸಂಬಂಧ ಇದೆ.
ಹೌದು.. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಪಿಚ್ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ದುಬೈನಲ್ಲಿ ಪ್ರಶಸ್ತಿ ನಿರ್ಧಾರಕ ಪಂದ್ಯಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಅಧಿಕಾರಿಗಳು ಪಿಚ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಮೈದಾನದ ಸಿಬ್ಬಂದಿ ಇಡೀ ಆವರಣಕ್ಕೆ ನೀರುಣಿಸಿದರು.
ಇಷ್ಟಕ್ಕೂ ಯಾವುದು ಈ ಪಿಚ್?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಸೆಂಟರ್-ವಿಕೆಟ್ ಅನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ. ಇದೇ ಪಿಚ್ ಅನ್ನು ಭಾನುವಾರದ ಪಂದ್ಯಕ್ಕೆ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಚ್ ಗೂ ಪಾಕಿಸ್ತಾನಕ್ಕೆ ಅವಿನಾಭಾವ ಸಂಬಂಧ
ಇನ್ನು ಈ ಪಿಚ್ ಪಾಕಿಸ್ತಾನ ಕ್ರಿಕೆಟ್ ನೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಹಾಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಪಿಚ್ ನಲ್ಲಿ ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಸೋಲಿನಿಂದಾಗಿಯೇ ಪಾಕಿಸ್ತಾನ ಇಡೀ ಟೂರ್ನಿಯಿಂದಲೇ ಹೊರಬೀಳುವಂತಾಯಿತು. ಅಲ್ಲದೆ ಪಾಕಿಸ್ತಾನ ಟೂರ್ನಿಯ ಆಯೋಜಿತ ತಂಡವಾಗಿದ್ದೂ ಕೂಡ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಕುಖ್ಯಾತಿಗೂ ಪಾತ್ರವಾಗಿತ್ತು.
ಫೈನಲ್ ಗೆ ಬಳಸಿದ ಪಿಚ್ ಏಕೆ?
ಗಮನಾರ್ಹವಾಗಿ, ಚಾಂಪಿಯನ್ಸ್ ಟ್ರೋಫಿಯಂತಹ ಮಹತ್ವದ ಟೂರ್ನಿಯಲ್ಲಿ ಈಗಾಗಲೇ ಬಳಸಲಾಗಿರುವ ಪಿಚ್ ಅನ್ನು ಬಳಸುತ್ತಿರುವುದೇಕೆ ಎಂಬ ಪ್ರಶ್ನೆ ಮೂಡುತ್ತಿದ್ದು, ಇದಕ್ಕೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ನೀತಿ ಕಾರಣ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಂದ್ಯಗಳಿಗೆ ಮೊದಲು ILT20 ಅನ್ನು ಆಯೋಜಿಸಲಾಗಿತ್ತು. ದುಬೈನಲ್ಲಿನ ಪಿಚ್‌ಗಳಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು 'ಎರಡು ವಾರಗಳ ವಿಶ್ರಾಂತಿ' ನೀತಿಯನ್ನು ಕಾಯ್ದುಕೊಂಡಿದೆ. ಹೀಗಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ಗೆ 'ಈಗಾಗಲೇ ಬಳಸಿದ' ಪಿಚ್ ಅನ್ನು ಬಳಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಯುಎಇ ಕ್ರಿಕೆಟ್ ಮಂಡಳಿ ಹೇಳಿದೆ.
ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಪಿಚ್ ಅನ್ನು ಕೊನೆಯದಾಗಿ ಬಳಸಲಾಗಿತ್ತು. ಈಗ ಮಾರ್ಚ್ 09 ರಂದು ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಪಿಚ್ ಬಳಕೆ ಮಾಡಿ ಈಗಾಗಲೇ 2 ವಾರ ಪೂರ್ಣಗೊಂಡಿದ್ದು, ಈ ಪಿಚ್ ಇದೀಗ ಬಳಕೆಗೆ ಲಭ್ಯವಿದೆ. ಈ ಪಿಚ್ ನ ಮೊದಲ ನೋಟವನ್ನು ಶನಿವಾರ ಸಾರ್ವಜನಿಕಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement