
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿದ ಭಾರತ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಪ್ರಬಲ ಆಸ್ಟ್ರೇಲಿಯಾದ ದಾಖಲೆ ಮುರಿದಿದೆ.
ಹೌದು.. ಇಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 252 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ತಂಡ 49 ಓವರ್ ನಲ್ಲೇ 6 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿ 4 ವಿಕೆಟ್ ಗಳ ಅಂತರದಲ್ಲಿ ಗೆದ್ದು ಬೀಗಿತು. ಆ ಮೂಲಕ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿದೆ.
ದೈತ್ಯ ಆಸ್ಟ್ರೇಲಿಯಾ ದಾಖಲೆ ಉಡೀಸ್
ಇನ್ನು ಐಸಿಸಿ ಟೂರ್ನಿಗಳ ವಿಚಾರ ಬಂದಾಗ ಆಸ್ಟ್ರೇಲಿಯಾ ಅತೀ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದ ತಂಡವಾಗಿದ್ದು, ಇಷ್ಟು ದಿನ ಎಲ್ಲ ಮೂರು ವಿಭಾಗದ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಐಸಿಸಿ ಟೂರ್ನಿಗಳನ್ನು ಗೆದ್ದ ತಂಡವಾಗಿತ್ತು. ಆದರೆ ಇದೀಗ ಚಾಂಪಿಯನ್ಸ್ ಟ್ರೋಫಿ ವಿಭಾಗದಲ್ಲಿ ಭಾರತದ ಆಸಿಸ್ ದೈತ್ಯರನ್ನು ಹಿಂದಿಕ್ಕಿದೆ. 2017ರಲ್ಲಿ ಭಾರತ ರನ್ನರ್ ಅಪ್ ಆಗಿತ್ತು. ಅಂದು ಪಾಕಿಸ್ತಾನ ವಿರುದ್ಧ ಫೈನಲ್ ನಲ್ಲಿ ಭಾರತ ಸೋತಿತ್ತು.
3ನೇ ಬಾರಿಗೆ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ
ಇನ್ನು ಈ ವರೆಗೂ 9 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಾಗಿದ್ದು ಈ ಪೈಕಿ ಆಸ್ಟ್ರೇಲಿಯಾ 2 ಬಾರಿ ಗೆದ್ದಿತ್ತು. ಆಸ್ಟ್ರೇಲಿಯಾ 2006 ಮತ್ತು 2009ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅತೀ ಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡವಾಗಿ ಬೀಗುತ್ತಿತ್ತು. ಆದರೆ ಇದೀಗ ಭಾರತ 3ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಡುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಆಸ್ಟ್ರೇಲಿಯಾದ ದಾಖಲೆಯನ್ನು ಹಿಂದಿಕ್ಕಿದೆ.
ಭಾರತ ಮೊದಲು 2002ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಂದು ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳನ್ನು ಜಂಟಿ ವಿನ್ನರ್ಸ್ ಆಗಿ ಘೋಷಣೆ ಮಾಡಲಾಗಿತ್ತು. ಬಳಿಕ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದೀಗ 2025ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದಿದೆ.
Advertisement