
ದುಬೈ: 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಸಮಾರಂಭದ ಗದ್ದಲದ ನಡುವೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ದೊಡ್ಡ ಸಂದೇಶ ಕಳುಹಿಸಿದೆ.
ಹೌದು.. ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಐಸಿಸಿ ದೊಡ್ಡ ಸಂದೇಶ ರವಾನಿಸಿದೆ. ಪಿಸಿಬಿ ಮಾತ್ರವಲ್ಲದೇ ಟೂರ್ನಿಯ ಹೋಸ್ಟ್ ಅಲ್ಲದಿದ್ದರೂ ಐದು ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಧನ್ಯವಾದಗಳನ್ನು ಅರ್ಪಿಸಿದೆ.
1996ರ ನಂತರ ಅಂದರೆ ಬರೊಬ್ಬರಿ 29 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ಆಯೋಜನೆಯಾಗಿತ್ತು. ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆದ ಈ ಟೂರ್ನಿಯಲ್ಲಿ ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಎಂಬ ನಾಲ್ಕು ಸ್ಥಳಗಳಲ್ಲಿ ಪಂದ್ಯಗಳು ನಡೆದಿತ್ತು. ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದೇ ವಿಚಾರವಾಗಿ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡೈಸ್, ಟೂರ್ನಿ ಆಯೋಜಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಯುಎಇ ಕ್ರಿಕೆಟ್ ಬೋರ್ಡ್ ಗಳಿಗೆ ಧನ್ಯವಾದ ಹೇಳಿದ್ದಾರೆ.
'2025ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನಾವು ಧನ್ಯವಾದ ಮತ್ತು ಅಭಿನಂದಿಸಲು ಬಯಸುತ್ತೇವೆ. 1996ರ ನಂತರ ಪಾಕಿಸ್ತಾನ ದೇಶದಲ್ಲಿ ನಡೆದ ಮೊದಲ ಜಾಗತಿಕ ಬಹು-ತಂಡ ಕ್ರಿಕೆಟ್ ಪಂದ್ಯಾವಳಿ ಇದಾಗಿರುವುದರಿಂದ, ಈ ಪಂದ್ಯಾವಳಿಯು ಪಿಸಿಬಿಗೆ ಬಹಳ ಮಹತ್ವದ್ದಾಗಿತ್ತು ಮತ್ತು ಕ್ರೀಡಾಂಗಣಗಳನ್ನು ನವೀಕರಿಸುವುದು, ಆಟದ ಮೇಲ್ಮೈಗಳನ್ನು ಸಿದ್ಧಪಡಿಸುವುದು, ಪಂದ್ಯಗಳನ್ನು ತಲುಪಿಸುವುದು ಮತ್ತು ತಂಡಗಳು ಮತ್ತು ಸಂದರ್ಶಕರನ್ನು ಆಯೋಜಿಸುವಲ್ಲಿ ತೊಡಗಿರುವ ಎಲ್ಲರೂ ಅವರ ಪ್ರಯತ್ನಗಳ ಬಗ್ಗೆ ತುಂಬಾ ಹೆಮ್ಮೆಪಡಬೇಕು" ಎಂದು ಅವರು ಹೇಳಿದರು.
ಅಂತೆಯೇ "ದುಬೈನಲ್ಲಿ ಐದು ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಮತ್ತು ಐಸಿಸಿ ತನ್ನ ಪ್ರಮುಖ ಪುರುಷ ಮತ್ತು ಮಹಿಳಾ ಪಂದ್ಯಾವಳಿಗಳನ್ನು ಆಯೋಜಿಸುವಲ್ಲಿ ಉತ್ತಮ ಬೆಂಬಲವನ್ನು ನೀಡುತ್ತಿರುವ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಐಸಿಸಿ ಧನ್ಯವಾದಗಳನ್ನು ಅರ್ಪಿಸುತ್ತದೆ" ಎಂದು ಅವರು ಹೇಳಿದ್ದಾರೆ.
"ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ತಮ್ಮ ಸ್ಥಳಗಳಲ್ಲಿ ಅಥವಾ ಉಪಗ್ರಹ ಮತ್ತು ಡಿಜಿಟಲ್ ಚಾನೆಲ್‌ಗಳಲ್ಲಿ ಹೆಚ್ಚಿನ ಉತ್ಸಾಹದಿಂದ ವೀಕ್ಷಿಸಿದರು, ಈ ಪಂದ್ಯಾವಳಿಯು ಮತ್ತೊಮ್ಮೆ ಐಸಿಸಿ ಕಾರ್ಯಕ್ರಮಗಳ ಮಹತ್ವವನ್ನು ತೋರಿಸಿದೆ. ಇದನ್ನು ಅಂತಹ ಆಕರ್ಷಕ ಕಾರ್ಯಕ್ರಮವನ್ನಾಗಿ ಮಾಡಿದ್ದಕ್ಕಾಗಿ ಭಾಗವಹಿಸಿದ ಎಂಟು ತಂಡಗಳಿಗೆ ಧನ್ಯವಾದಗಳು ಮತ್ತು ಸ್ಮರಣೀಯ ಫೈನಲ್‌ನಲ್ಲಿ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದ ಭಾರತಕ್ಕೆ ಅಭಿನಂದನೆಗಳು" ಎಂದು ಅವರು ಹೇಳಿದ್ದಾರೆ.
Advertisement