
ಐಪಿಎಲ್ 2025ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ಈ ಬಾರಿ ಉತ್ತಮ ತಂಡವನ್ನು ಒಳಗೊಂಡಿದ್ದು, ಪ್ಲೇಆಫ್ ಪ್ರವೇಶಲಿದೆ ಎಂದು ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.
ಜಿಯೋ ಹಾಟ್‌ಸ್ಟಾರ್‌ನ ಪತ್ರಿಕಾ ಪ್ರಕಟಣೆ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, 10 ವಿಶ್ವ ದರ್ಜೆಯ ತಂಡಗಳ ಉಪಸ್ಥಿತಿ, ಪ್ರಯಾಣದ ಆಯಾಸ, ಗಾಯಗಳು ಮತ್ತು ವಿವಿಧ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಐಪಿಎಲ್ ಗೆಲ್ಲುವ ಸವಾಲುಗಳನ್ನು ಒತ್ತಿ ಹೇಳಿದ್ದಾರೆ.
'ಐಪಿಎಲ್ ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ, ಐಪಿಎಲ್ ಅನ್ನು ಬಿಟ್ಟು, ವಿಶ್ವಕಪ್ ಗೆಲ್ಲಬಹುದಾದ 10 ವಿಶ್ವ ದರ್ಜೆಯ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಪ್ರಯಾಣ, ತಂಡದ ತಂತ್ರಗಳು, ಗಾಯಗಳು ಮತ್ತು ಆವೃತ್ತಿಯ ಉದ್ದಕ್ಕೂ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಸೇರಿದಂತೆ ಹಲವು ಪ್ರಮುಖ ಅಂಶಗಳು ಇದರಲ್ಲಿ ಸೇರಿವೆ. ಪಂದ್ಯಾವಳಿಯ ಕೊನೆಯ ಭಾಗದಲ್ಲಿ ಶಕ್ತಿ ಮತ್ತು ಆವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವ ತಂಡವು ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತದೆ. ತಮ್ಮ ತವರು ಮೈದಾನದ ಅನುಕೂಲವನ್ನು ಬಳಸಿಕೊಳ್ಳುವ ತಂಡಗಳು ಉತ್ತಮ ಪ್ರದರ್ಶನ ನೀಡುತ್ತವೆ' ಎಂದು ಎಬಿ ಡಿವಿಲಿಯರ್ಸ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೇಳಿದ್ದಾರೆ.
18ನೇ ಆವೃತ್ತಿಯಲ್ಲಿ ಆರ್‌ಸಿಬಿ ಟ್ರೋಫಿಯನ್ನು ಎತ್ತಿ ಹಿಡಿಯುತ್ತದೆ ಎಂದು ಅವರು ಆಶಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ 18ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿ ಮುನ್ನಡೆಯುತ್ತಿದ್ದಾರೆ.
'ಇದು 18ನೇ ಸೀಸನ್ ಆಗಲಿ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ 18ನೇ ನಂಬರ್ ಹೊಂದಿರುವ ವಿರಾಟ್ ಇದ್ದಾರೆ. ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿದರೆ, ವಿರಾಟ್ ಜೊತೆ ಆಚರಿಸಲು ನಾನು ಅಲ್ಲಿಗೆ ಬರುತ್ತೇನೆ!' ಎಂದು ಮಿಸ್ಟರ್ 360° ಎಂದು ಕರೆಯಲ್ಪಡುವ ಡಿವಿಲಿಯರ್ಸ್ ಹೇಳಿದ್ದಾರೆ.
ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕಾರಣದಿಂದಾಗಿ ಇನ್ಮುಂದೆ ಆರ್‌ಸಿಬಿ ನಾಯಕನಾಗಿ ರಜತ್ ಪಾಟೀದಾರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬಲಿಷ್ಠ ತಂಡವನ್ನು ಕಟ್ಟಿದ್ದು, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ.
ಕಳೆದ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್‌ರನ್ನು ಮೆಗಾ ಹರಾಜಿಗೆ ಮುನ್ನ ತಂಡದಿಂದ ಕೈಬಿಡಲಾಗಿದ್ದು, ವಿರಾಟ್ ಕೊಹ್ಲಿ, ಯಶ್ ದಯಾಳ್ ಮತ್ತು ರಜತ್ ಪಾಟೀದಾರ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು. 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಜೋಶ್ ಹ್ಯಾಜಲ್‌ವುಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ ಮತ್ತು ಸುಯಾಶ್ ಶರ್ಮಾಸೇರಿದಂತೆ ಅನೇಕ ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
Advertisement