
ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಆರ್‌ಸಿಬಿ ಶುಭಾರಂಭ ಮಾಡಿದ್ದು, ಈ ಪಂದ್ಯ ವೀಕ್ಷಿಸುವುದು ಆರ್‌ಸಿಬಿ ತಂಡದ ಸಾವಿರಾರು ಅಭಿಮಾನಿಗಳ ಕನಸಾಗಿರುತ್ತದೆ.
ಅಂತಹ ಅಭಿಮಾನಿಗಳಲ್ಲಿ ಒಬ್ಬರು ಸಾವಿರಾರು ಮೈಲುಗಳಷ್ಟು ದೂರದಿಂದಲೇ ಆರ್‌ಸಿಬಿ ಗೆಲುವನ್ನು ಆಚರಿಸಿದ್ದು, ತಂಡಕ್ಕೆ ಶುಭಕೋರಿದ್ದಾರೆ. ಆರ್ಥಿಕ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಅಭಿನಂದನಾ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
'ಕೆಕೆಆರ್ ವಿರುದ್ಧದ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿಗೆ ಅಭಿನಂದನೆಗಳು. ಕೊನೆಗೂ ಆರ್‌ಸಿಬಿ ಉತ್ತಮವಾಗಿ ಬೌಲಿಂಗ್ ಮಾಡಿದೆ ಎಂದು ವೀಕ್ಷಕ ವಿವರಣೆಗಾರರು ಹೇಳುವುದನ್ನು ಕೇಳಿ ಸಂತೋಷವಾಯಿತು. ಬ್ಯಾಟಿಂಗ್ ಲೈನ್ ಅಪ್ ಸ್ವತಃ ಮಾತನಾಡುತ್ತದೆ' ಎಂದು ಮಲ್ಯ ಪೋಸ್ಟ್ ಮಾಡಿದ್ದಾರೆ.
2008ರಲ್ಲಿ ಉದ್ಘಾಟನಾ ಆವೃತ್ತಿಯಿಂದ ಎಂಟು ಆವೃತ್ತಿಗಳಿಗೆ ಫ್ರಾಂಚೈಸಿಯ ಮಾಲೀಕ್ವವನ್ನು ಹೊಂದಿದ್ದ ಮಲ್ಯ, ಸದ್ಯ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ. ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ ಸರ್ಕಾರವು ದಶಕದಿಂದ ಪ್ರಯತ್ನ ಮಾಡುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಭಾರತೀಯ ಬ್ಯಾಂಕುಗಳಿಂದ ₹9,000 ಕೋಟಿಗೂ ಹೆಚ್ಚು ಸಾಲವನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆರೋಪ ಈ ಮಲ್ಯ ಮೇಲಿದೆ.
ಐಪಿಎಲ್ ಇತಿಹಾಸದಲ್ಲಿ 10 ತಂಡಗಳ ಪೈಕಿ ಈವರೆಗೂ ಕಪ್ ಗೆಲ್ಲದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಕೂಡ ಒಂದು. ಮೂರು ಬಾರಿ ಫೈನಲ್ ತಲುಪಿದ್ದರೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 10 ಫ್ರಾಂಚೈಸಿಗಳನ್ನು ಒಳಗೊಂಡ 18ನೇ ಆವೃತ್ತಿಯ ಕ್ರಿಕೆಟ್ ಲೀಗ್ ಮೇ 25ರವರೆಗೆ ನಡೆಯಲಿದೆ.
Advertisement