
ಬೇ ಓವಲ್: ಅದ್ಯಾಕೋ ಪಾಕಿಸ್ತಾನ ಕ್ರಿಕೆಟ್ ತಂಡದ ಟೈಮೇ ಸರಿ ಇಲ್ಲ ಎಂದು ಕಾಣುತ್ತದೆ. ಚಾಂಪಿಯನ್ಸ್ ಟ್ರೋಫಿಯ ಹೀನಾಯ ಸೋಲಿನ ಬಳಿಕ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನಕ್ಕೆ ಅಲ್ಲಿಯೂ ಮುಖಭಂಗ ಎದುರಾಗಿದೆ.
ಹೌದು.. ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ ಅವಮಾನಕರ ಸೋಲನ್ನು ಅನುಭವಿಸಿದ್ದು, ಬರೊಬ್ಬರಿ 115 ರನ್ ಗಳ ಅಂತರದಲ್ಲಿ ಹೀನಾಯವಾಗಿ ಸೋತು ಸರಣಿ ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಪ್ರತಿಯೊಂದು ವಿಭಾಗದಲ್ಲೂ ವಿಫಲವಾಯಿತು.
ಮೊದಲು ಬೌಲರ್‌ಗಳು ಸರಾಗವಾಗಿ ರನ್ ಬಿಟ್ಟುಕೊಟ್ಟರೆ, ಆ ನಂತರ ಗುರಿ ಬೆನ್ನಟ್ಟುವಾಗ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಈ ಸೋಲಿನೊಂದಿಗೆ ಪಾಕಿಸ್ತಾನ ತಂಡ ಸರಣಿ ಸೋತಿದ್ದು, ನ್ಯೂಜಿಲೆಂಡ್ 3-1 ಅಂತರದ ಮುನ್ನಡೆ ಸಾಧಿಸಿದೆ. ಅಲ್ಲದೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್
ಇಂದು ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಗೆಲ್ಲಲು 220 ರನ್ ಗಳ ಬೃಹತ್ ಗುರಿ ನೀಡಿತ್ತು. ನ್ಯೂಜಿಲೆಂಡ್ ಪರ ಪರ ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಟಿಮ್ ಸೀಫರ್ಟ್ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 44 ರನ್ ಗಳಿಸಿ ಔಟಾದರೆ, ಫಿನ್ ಅಲೆನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಆದರೆ ಮುಂದಿನ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡರು. ಇದಾದ ನಂತರ, ಮೈಕೆಲ್ ಬ್ರೇಸ್‌ವೆಲ್ ಅಜೇಯ 46 ರನ್ಗಳ ಕಾಣಿಕೆ ನೀಡಿದರೆ, ಡ್ಯಾರಿಲ್ ಮಿಚೆಲ್ 29 ರನ್ ಗಳಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ಪಾಕ್ ಬೌಲರ್ ಗಳ ಹೀನಾಯ ಪ್ರದರ್ಶನ
ಈ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ ಗಳು ದುಬಾರಿಯಾದರು. ಪಾಕ್ ವೇಗದ ಅಸ್ತ್ರ ಶಾಹೀನ್ ಅಫ್ರಿದಿ 4 ಓವರ್ ನಲ್ಲಿ 49 ರನ್ ನೀಡಿದರೆ, ಶದಾಬ್ ಖಾನ್ ಕೂಡ 49 ರನ್ ನೀಡಿ ದುಬಾರಿ ಎನಿಸಿದರು. ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಶುಭ್ ಮನ್ ಗಿಲ್ ರನ್ನು ಔಟ್ ಮಾಡಿದ್ದ 'ಕಣ್ಸನ್ನೆ ಹುಡುಗ' ಅಬ್ರಾರ್ ಅಹ್ಮದ್ 4 ಓವರ್ ನಲ್ಲಿ 2 ವಿಕೆಟ್ ಪಡೆದು 41 ರನ್ ನೀಡಿದ್ದಾರೆ. ಈ ಪೈಕಿ ಹ್ಯಾರಿಸ್ ರೌಫ್ ಮಾತ್ರ 4 ಓವರ್ ಎಸೆದು 3 ವಿಕೆಟ್ ಪಡೆದು 27 ರನ್ ನೀಡಿದ್ದಾರೆ.
ಪಾಕಿಸ್ತಾನದ ಒಂದಂಕಿ ಆಟ
ಇನ್ನು ನ್ಯೂಜಿಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನದ ಬ್ಯಾಟರ್ ಗಳು ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದರು. ಇರ್ಫಾನ್ ಖಾನ್ (24 ರನ್) ಮತ್ತು ಅಬ್ದುಲ್ ಸಮದ್ (44 ರನ್) ಇವರನ್ನು ಹೊರತುಪಡಿಸಿದರೆ ಪಾಕಿಸ್ತಾನ ಉಳಿದಾವ ಆಟಗಾರ ಕೂಡ ಎರಡಂಕಿ ಮೊತ್ತಕ್ಕೆ ಬರಲೇ ಇಲ್ಲ. ಆರಂಭಿಕ ಆಟಗಾರ ಮಹಮದ್ ಹ್ಯಾರಿಸ್ 2, ಹಸನ್ ನವಾಜ್, ಸಲ್ಮಾನ್ ಆಘಾ, ಶದಾಬ್ ಖಾನ್, ಅಬ್ಬಾಸ್ ಅಫ್ರಿದಿ ತಲಾ 1 ರನ್ ಗಳಿಸಿದರೆ, ಕುಶ್ದೀಲ್ ಶಾ, ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ತಲಾ 6 ರನ್ ಗಳಿಸಿದರು. ಇದು ಪಾಕಿಸ್ತಾನದ ಬ್ಯಾಟಿಂಗ್ ಪ್ರದರ್ಶನಕ್ಕೆ ಹಿಡಿದ ಕನ್ನಡಿಯಾಗಿತ್ತು.
ಅಂತಿಮವಾಗಿ ಪಾಕಿಸ್ತಾನ 16.2 ಓವರ್ ನಲ್ಲಿ ಕೇವಲ 105 ರನ್ ಗಳಿಸಿ ಬರೊಬ್ಬರಿ 115 ರನ್ ಗಳ ಹೀನಾಯ ಸೋಲು ಕಂಡಿದೆ. ಮಾತ್ರವಲ್ಲದೇ 4-1 ಅಂತರದಲ್ಲಿ ಟಿ20 ಸರಣಿಯನ್ನೂ ಕೈ ಚೆಲ್ಲಿದೆ.
Advertisement