
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ (Rachin Ravindra) ಅವರು ಚೆನ್ನೈನಲ್ಲಿ ಮೊದಲ ಬಾರಿಗೆ ಎಂಎಸ್ ಧೋನಿ ಅಭಿಮಾನಿಗಳ ಅಗಾಧ ಉತ್ಸಾಹವನ್ನು ಅನುಭವಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಸಿಎಸ್‌ಕೆ ಗೆಲ್ಲಲು ನಾಲ್ಕು ರನ್‌ಗಳು ಬೇಕಾಗಿದ್ದಾಗ, ಇಡೀ ಚೆಪಾಕ್ ಕ್ರೀಡಾಂಗಣವು ಧೋನಿಯ ಸಿಕ್ಸರ್‌ಗಾಗಿ ಕಾಯುತ್ತಿತ್ತು. ಆದರೆ ಈ ಬಾರಿ ರವೀಂದ್ರ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಡೀಪ್ ಮಿಡ್‌ವಿಕೆಟ್ ಮೇಲೆ ಸಿಕ್ಸರ್ ಬಾರಿಸಿ ತಂಡಕ್ಕೆ ನಾಲ್ಕು ವಿಕೆಟ್‌ಗಳ ಗೆಲುವು ತಂದುಕೊಟ್ಟರು.
ನೀವು ಮೈದಾನದಲ್ಲಿದ್ದಾಗ, ಪಂದ್ಯವನ್ನು ಗೆಲ್ಲುವುದರ ಮೇಲೆ ಮಾತ್ರ ಗಮನವಿರುತ್ತದೆ. ಆದರೆ ಈ ವಾತಾವರಣವನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿತ್ತು. ಧೋನಿ ಮೈದಾನಕ್ಕೆ ಬಂದಾಗ, ಕ್ರೀಡಾಂಗಣದಲ್ಲಿ ಶಿಳ್ಳೆಗಳು ಮತ್ತು ಗದ್ದಲಗಳು ಪ್ರತಿಧ್ವನಿಸುವುದನ್ನು ಅನುಭವಿಸಬಹುದು. ಅವರೊಂದಿಗೆ ಕ್ರೀಸ್ ಹಂಚಿಕೊಳ್ಳುವುದು ನನಗೆ ತುಂಬಾ ವಿಶೇಷವಾಗಿತ್ತು ಎಂದು ರಚಿನ್ ರವೀಂದ್ರ ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿಗೆ ಸ್ಟ್ರೈಕ್ ನೀಡಬೇಕೆಂದು ಮತ್ತು ಅವರು ತಮ್ಮದೇ ಆದ ಶೈಲಿಯಲ್ಲಿ ಪಂದ್ಯವನ್ನು ಮುಗಿಸಬೇಕೆಂದು ಬಯಸಿದ್ದರು ಎಂದು ರವೀಂದ್ರ ಒಪ್ಪಿಕೊಂಡರು. ಎಲ್ಲರೂ ನಾನು ಅವರಿಗೆ ಸ್ಟ್ರೈಕ್ ನೀಡಬೇಕೆಂದು ಮತ್ತು ಧೋನಿ ಪಂದ್ಯವನ್ನು ಮುಗಿಸಬೇಕೆಂದು ಬಯಸಿದ್ದರು. ಆದರೆ ರಚಿನ್ ಸಿಕ್ಸರ್ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಇದು ಅಭಿಮಾನಿಗಳ ನಿರಾಸೆಗೆ ಕಾರಣವಾಯಿತು. ಇನ್ನು ಭಾರತೀಯ ಮೂಲದ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಆರಂಭಿಕನಾಗಿ ಬಂದು ಕೊನೆಯ ಹಂತದವರೆಗೂ ಕ್ರೀಸ್ನಲ್ಲಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಧೋನಿ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ, ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ರಚಿನ್ ರವೀಂದ್ರಗೆ ಗೆಲುವಿನ ರನ್ ಗಳಿಸುವ ಅವಕಾಶವನ್ನು ನೀಡಿದರು. ಅದರಂತೆ 20ನೇ ಓವರ್‌ನ ಮೊದಲ ಎಸೆತದಲ್ಲಿ ರಚಿನ್ ರವೀಂದ್ರ ಸಿಕ್ಸರ್ ಮೂಲಕ ವಿನ್ನಿಂಗ್ ಶಾಟ್ ಬಾರಿಸಿದರು.
ಇದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಚಿನ್ ರವೀಂದ್ರ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಎಂಎಸ್ ಧೋನಿ ಅಭಿಮಾನಿಗಳು ತೀರಾ ಕೆಳ ಮಟ್ಟದ ಕ್ರೀಡಾ ಮನೋಭಾವವನ್ನು ತೋರಿಸಿದ್ದಾರೆ. ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿಗೆ (MS Dhoni) ಸ್ಟ್ರೈಕ್ ನೀಡದಿದ್ದಕ್ಕಾಗಿ ರಚಿನ್ ಅವರನ್ನು ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರು ಟೀಕಿಸಿದ್ದಾರೆ. ಧೋನಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿನ್ನಿಂಗ್ ಶಾಟ್ ಹೊಡೆಯಲು ರಚಿನ್ ಅವಕಾಶ ಮಾಡಿಕೊಡಲಿಲ್ಲ ಎಂದು ಧೋನಿ ಫ್ಯಾನ್ಸ್ ಬರೆದುಕೊಂಡಿದ್ದಾರೆ.
Advertisement