
ಅಹ್ಮದಾಬಾದ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆರಂಭಿಸಿದ್ದ ಬ್ಯಾಟಿಂಗ್ ಅಬ್ಬರವನ್ನು ಶ್ರೇಯಸ್ ಅಯ್ಯರ್ ಐಪಿಎಲ್ ನಲ್ಲೂ ಮುಂದುವರೆಸಿದ್ದು, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಪಂಜಾಬ್ ಪರ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 3 ರನ್ ಅಂತರದಲ್ಲಿ ಐಪಿಎಲ್ ಶತಕ ಮಿಸ್ ಮಾಡಿಕೊಂಡಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ (ಅಜೇಯ 97 ರನ್), ಪ್ರಿಯಾಂಶ್ ಆರ್ಯ (47 ರನ್) ಮತ್ತು ಶಶಾಂಕ್ ಸಿಂಗ್ (ಅಜೇಯ 44 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿದೆ. ಆ ಮೂಲಕ ಗುಜರಾತ್ ಗೆ ಗೆಲ್ಲಲು 244 ರನ್ ಗಳ ಬೃಹತ್ ಗುರಿ ನೀಡಿದೆ.
3 ರನ್ ಅಂತರದಲ್ಲಿ ಅಯ್ಯರ್ ಶತಕ ಮಿಸ್
ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. ಆದರೆ ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಕೊನೆಯ ಓವರ್ ನಲ್ಲಿ ಅಯ್ಯರ್ ಗೆ ಶತಕ ಸಿಡಿಸುವ ಅವಕಾಶ ವಿತ್ತಾದರೂ ಅಯ್ಯರ್ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಶಶಾಂಕ್ ಸಿಂಗ್ ಗೆ ಅವಕಾಶ ನೀಡಿ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು.
ಅಂತಿಮ ಓವರ್ ನಲ್ಲಿ 23 ರನ್
ಇನ್ನು ಕೊನೆಯ ಓವರ್ ನಲ್ಲಿ ಶಶಾಂಕ್ ಸಿಂಗ್ ಸಿಂಗಲ್ ನೀಡಲು ಮುಂದಾದರಾದರೂ ಮತ್ತೊಂದು ಬದಿಯಲ್ಲಿ 97 ರನ್ ಸಿಡಿಸಿ ಶತಕದ ಅಂಚಿನಲ್ಲಿದ್ದ ಶ್ರೇಯಸ್ ಅಯ್ಯರ್ ನೀನೆ ಮುಕ್ತಾಯ ಮಾಡು ಎಂಬರ್ಥದಲ್ಲಿ ಸಲಹೆ ನೀಡಿದರು. ಅಯ್ಯರ್ ಸಲಹೆಯಂತೆ ಶಶಾಂಕ್ ಸಿಂಗ್ ಸಿರಾಜ್ ಬೌಲಿಂಗ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ 5 ಬೌಂಡರಿ ಸಹಿತ ಬರೊಬ್ಬರಿ 23 ರನ್ ಸಿಡಿಸಿದರು. ಶಶಾಂಕ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಪಂಜಾಬ್ ಕಿಂಗ್ಸ್ ಗುಜರಾತ್ ಗೆ ಗೆಲ್ಲಲು 244 ರನ್ ಗಳ ಬೃಹತ್ ಗುರಿ ನೀಡಿದೆ.
ಗುಜರಾತ್ ಪರ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ಕಾಗಿಸೋ ರಬಾಡಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಪಡೆದರು.
Advertisement