
ಗುವಾಹತಿ: ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆರಂಭವಾಗಿ ವಾರಗಳೇ ಕಳೆದರೂ ರಾಜಸ್ತಾನ ರಾಯಲ್ಸ್ ತಂಡ ಗುವಾಹತಿಯಲ್ಲಿ ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರ ನೃತ್ಯ ಪ್ರದರ್ಶನ ಆಯೋಜನೆ ಮಾಡುವ ಮೂಲಕ ಇದೀಗ ವ್ಯಾಪಕ ಟ್ರೋಲ್ ಗೆ ತುತ್ತಾಗಿದೆ.
ಹೌದು.. ಈ ಹಿಂದೆ ಈ ನೃತ್ಯ ಪ್ರದರ್ಶನ ಕಾರ್ಯಕ್ರಮವು ಬೇರೊಂದು ಮೈದಾನದಲ್ಲಿ ಆಯೋಜನೆ ಮಾಡಲು ಯೋಜಿಸಲಾಗಿತ್ತು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಗುವಾಹಟಿಯ ಬರ್ಸಪರ ಕ್ರೀಡಾಂಗಣಕ್ಕೆ ಸ್ಥಳವಾಗಿದೆ. ಮಾರ್ಚ್ 30 ರಂದು ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೂ ಮುನ್ನ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಈ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಇದು ಪಂದ್ಯಾವಳಿಯಲ್ಲಿ ಗುವಾಹತಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯವಾಗಿದ್ದು, ಪ್ರತೀ ತಂಡಕ್ಕೂ ತನ್ನ ತವರಿನ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸುವ ಅವಕಾಶವಿದೆ. ಹೀಗಾಗಿ ರಾಜಸ್ತಾನ ತಂಡ ತನ್ನ ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿರುವ ಗುವಾಹತಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಈ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಹೇಳಲಾಗಿದೆ.
ರಿಯಾನ್ ಪರಾಗ್ ಫುಲ್ ಟ್ರೋಲ್
ಇನ್ನು ರಾಜಸ್ಥಾನ ರಾಯಲ್ಸ್‌ನ ಎರಡನೇ ತವರು ಮೈದಾನದಲ್ಲಿ ಸಾರಾ ಅಲಿ ಖಾನ್ ನೃತ್ಯ ಪ್ರದರ್ಶನ ನೀಡುವ ಸುದ್ದಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ರಿಯಾನ್ ಪರಾಗ್ ಕೂಡ ಅಸ್ಸಾಂ ಮೂಲದ ಆಟಗಾರನಾಗಿದ್ದು, ಹಿಂದೆ ರಿಯಾನ್ ಪರಾಗ್ ಮಾಡಿದ್ದ ಎಡವಟ್ಟೊಂದು ಅವರನ್ನು ಅಭಿಮಾನಿಗಳು ಭೀಕರವಾಗಿ ಟ್ರೋಲ್ ಮಾಡುವಂತಾಗಿದೆ.
ರಿಯಾನ್ ಪರಾಗ್ ಮಾಡಿದ್ದೇನು?
ಈ ಹಿಂದೆ ರಿಯಾನ್ ಪರಾಗ್ ಮತ್ತು ಸಾರಾ ಅಲಿಖಾನ್ ಕುರಿತ ವಿಚಾರವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ರಿಯಾನ್ ಪರಾಗ್ ತಮ್ಮ ಮೊಬೈಲ್ ನಲ್ಲಿ ಸಾರಾ ಅಲಿಖಾನ್ ಮತ್ತು ನಟಿ ಅನನ್ಯ ಪಾಂಡೆ ಕುರಿತಂತೆ ಗೂಗಲ್ ಶೋಧ ಮಾಡಿದ್ದರು. ಇದರ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿದ್ದವು. ಇದೀಗ ಅದೇ ಸಾರಾ ಅಲಿಖಾನ್ ರಿಯಾನ್ ಪರಾಗ್ ನಾಯಕರಾಗಿರುವ ರಾಜಸ್ತಾನ ತಂಡದ ಪರವಾಗಿ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಂಜು ಸ್ಯಾಮ್ಸನ್ ಬದಲಿಗೆ ರಿಯಾನ್ ಪರಾಗ್ ಗೆ ನಾಯಕತ್ವ ಏಕೆ?
ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಟಿ20ಐ ಸರಣಿಯ ಸಮಯದಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಸಂಜು ಸ್ಯಾಮ್ಸನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಹಾಲಿ ಐಪಿಎಲ್ ಟೂರ್ನಿಯ ಮೊದಲ ಮೂರು ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ರಿಯಾನ್ ಪರಾಗ್ ಅವರನ್ನು ನೇಮಿಸಲಾಗಿದೆ.
Advertisement