
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 190 ರನ್ ಗಳಿಸಿತು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಎಸ್‌ಆರ್‌ಎಚ್ ತಂಡವನ್ನು 190 ರನ್ ಗಳಿಗೆ ಸೀಮಿತಗೊಳಿಸಲು ಶಾರ್ದೂಲ್ ಠಾಕೂರ್ ನೆರವಾದರು.
ಶಾರ್ದೂಲ್ 34 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂರನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದ್ದ ಇಶಾನ್ ಕಿಶಾನ್ ಅವರನ್ನು ಔಟ್ ಮಾಡಿದರು. ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಬದಲಿ ಆಟಗಾರನಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದ ಅವರು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಅಮೋಘ ಪ್ರದರ್ಶನ ನೀಡಿದರು. ಇದೀಗ ಪರ್ಪಲ್ ಕ್ಯಾಪ್ ಶಾರ್ದೂಲ್ ಅವರ ಪಾಲಾಗಿದೆ.
ಮೊಹ್ಸಿನ್ ಖಾನ್ ಅವರಿಗೆ ಗಾಯವಾಗಿರುವ ಕಾರಣ ಠಾಕೂರ್ ಎಲ್ಎಸ್‌ಜಿಗೆ ಆಡುವ ಅವಕಾಶ ಪಡೆದಿದ್ದು, ಇನಿಂಗ್ಸ್ ಮುಗಿದ ನಂತರ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವುದೇ ತಂಡದಿಂದ ಖರೀದಿಯಾಗದ ಕುರಿತು ಶಾರ್ದೂಲ್ ಠಾಕೂರ್ ಬಹಿರಂಗವಾಗಿ ಮಾತನಾಡಿದ್ದಾರೆ.
'ಕ್ರಿಕೆಟ್‌ನಲ್ಲಿ ಇದೆಲ್ಲವೂ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಹರಾಜಿನಲ್ಲಿ ನನ್ನನ್ನು ಯಾವುದೇ ಫ್ರಾಂಚೈಸಿ ಖರೀದಿಸದೇ ಇದ್ದದ್ದು ಕೆಟ್ಟ ದಿನವಾಗಿತ್ತು. ಬೌಲರ್ ಗಾಯಗಳಿಂದಾಗಿ ಎಲ್‌ಎಸ್‌ಜಿ ನನ್ನನ್ನು ಸಂಪರ್ಕಿಸಿತು. ಜಹೀರ್ ಖಾನ್ ಅವರು ನನ್ನೊಂದಿಗೆ ಈ ಬಗ್ಗೆ ಮಾತನಾಡಿದರು. ನಂತರ ನಾನು ಅದನ್ನು ಒಪ್ಪಿಕೊಳ್ಳಬೇಕಾಯಿತು. ಕ್ರಿಕೆಟ್‌ನಲ್ಲಿ ನೀವು ಅಂತಹ ವಿಷಯಗಳನ್ನು (ಏರಿಳಿತಗಳು) ಎದುರಿಸಬೇಕಾಗುತ್ತದೆ' ಎಂದು ಶಾರ್ದೂಲ್ ತಿಳಿಸಿದರು.
'ಆಟದಲ್ಲಿ ಗೆಲ್ಲುವುದು ನನಗೆ ಮುಖ್ಯ. ನಾನು ವಿಕೆಟ್‌ಗಳು ಅಥವಾ ರನ್‌ಗಳ ಕಾಲಮ್ ಅನ್ನು ನೋಡುವುದಿಲ್ಲ. ನಾನು ಪ್ರಭಾವ ಮತ್ತು ಪಂದ್ಯ ಗೆಲ್ಲುವ ಪ್ರದರ್ಶನ ನೀಡಲು ಬಯಸುತ್ತೇನೆ. ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದ್ದಾರೆ. ಬೌಲರ್‌ಗಳು ಏಕೆ ಅವರ ಮೇಲೆ ತೀವ್ರವಾಗಿ ದಾಳಿ ಮಾಡಬಾರದು ಎಂಬುದು SRH ವಿರುದ್ಧದ ನಮ್ಮ ಯೋಜನೆಯಾಗಿತ್ತು. ಅವರು ಫ್ಲಾಟ್ ಪಿಚ್‌ಗಳಲ್ಲಿ ಹೆಚ್ಚು ರನ್ ಗಳಿಸುತ್ತಿದ್ದಾರೆ ಎಂಬುದು ನಮ್ಮ ಗಮನದಲ್ಲಿತ್ತು' ಎಂದಿದ್ದಾರೆ.
ಎಸ್‌ಆರ್‌ಎಚ್ ನೀಡಿದ 191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 4 ರನ್ ಗಳಿಸುವಷ್ಟರಲ್ಲೇ ಏಡೆನ್ ಮಾರ್ಕ್ರಾಮ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ, ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಬಹುದೊಡ್ಡ ಆಸರೆಯಾಯಿತು. ನಿಕೋಲಸ್ ಪೂರನ್ 26 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್ ಸಹಿತ 70 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 52 ರನ್ ಗಳಿಸಿದರು.
ನಾಯಕ ರಿಷಬ್ ಪಂತ್ 15 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 13 ರನ್ ಹಾಗೂ ಅಬ್ದುಲ್ ಸಮದ್ 8 ಎಸೆತಗಳಲ್ಲಿ ಅಜೇಯ 22 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ಗೆ ಗೆಲುವು ತಂದುಕೊಟ್ಟರು.
Advertisement