
ಗುರುವಾರ ನಡೆದ ಐಪಿಎಲ್ 2025ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರ ನಾಲ್ಕು ವಿಕೆಟ್ ಮತ್ತು ನಿಕೋಲಸ್ ಪೂರನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಶಾರ್ದೂಲ್ ಠಾಕೂರ್ 34 ರನ್ ನೀಡಿ ನಾಲ್ಕು ಪ್ರಮುಖ ವಿಕೆಟ್ ಕಬಳಿಸಿದ್ದು, ಎಲ್‌ಎಸ್‌ಜಿ ತಂಡವು SRH ತಂಡವನ್ನು 9 ವಿಕೆಟ್ ನಷ್ಟಕ್ಕೆ ಕೇವಲ 190 ರನ್‌ಗಳಿಗೆ ಕಟ್ಟಿಹಾಕಲು ನೆರವಾಯಿತು. ನಿಕೋಲಸ್ ಪೂರನ್ 26 ಎಸೆತಗಳಲ್ಲಿ 70 ರನ್ ಗಳಿಸುವ ಮೂಲಕ LSG 16.1 ಓವರ್‌ಗಳಲ್ಲಿಯೇ ಗುರಿ ತಲುಪಲು ಸಹಾಯ ಮಾಡಿದರು. ಈ ಮೂಲಕ ಟೂರ್ನಿಯಲ್ಲಿ LSG ತಂಡವು ಮೊದಲ ಗೆಲುವು ದಾಖಲಿಸಿದೆ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. IPL 2025 ಅಂಕಪಟ್ಟಿಯಲ್ಲಿ ಲಕ್ನೋ ಎರಡನೇ ಸ್ಥಾನಕ್ಕೆ ಏರಿದೆ. LSG ಯ ನಿಕೋಲಸ್ ಪೂರನ್ 145 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. LSG ಯ ಶಾರ್ದೂಲ್ ಠಾಕೂರ್ ಆರು ವಿಕೆಟ್ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಐಪಿಎಲ್ 2025ರ ಆವೃತ್ತಿಯಲ್ಲಿ 7 ಪಂದ್ಯಗಳು ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿವೆ. ಉಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ತಂಡಗಳು ಕೇವಲ ಒಂದು ಪಂದ್ಯ ಆಡಿವೆ.
ಆರ್‌ಸಿಬಿಗೆ ಅಗ್ರಸ್ಥಾನ
ಐಪಿಎಲ್ 2025 ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಗೆಲುವು ಸಾಧಿಸಿದ ಬಳಿಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನಕ್ಕೇರಿದೆ. ತಾವು ಆಡಿರುವ ಒಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ 2.137 ರನ್‌ರೇಟ್‌ನೊಂದಿಗೆ ಮೊದಲ ಸ್ಥಾನಕ್ಕೇರಿದೆ. ಸನ್‌ರೈಸರ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಲಕ್ನೋ 2 ಅಂಕಗಳು, 0.963 ರನ್‌ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ 3, 4, 5 ಮತ್ತು 6ನೇ ಸ್ಥಾನದಲ್ಲಿವೆ. ಕೆಕೆಆರ್ 7ನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ 9 ಹಾಗೂ 10ನೇ ಸ್ಥಾನದಲ್ಲಿವೆ. ಮುಂಬೈ ಇಂಡಿಯನ್ಸ್, ಗುಜರಾತ್ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿವೆ. ಇತ್ತ ರಾಜಸ್ಥಾನ ರಾಯಲ್ಸ್ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.
ಶುಕ್ರವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುವ ಬಹುನಿರೀಕ್ಷಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ.
Advertisement