
ಶುಕ್ರವಾರ ನಡೆದ ಐಪಿಎಲ್ 2025ನೇ ಆವೃತ್ತಿಯ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು ಸಿಎಸ್‌ಕೆ ಅಭಿಮಾನಿಗಳು ಅಣಕಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಜಿತೇಶ್ ಅವರು ಸಿಎಸ್‌ಕೆ ಮತ್ತು ಅವರ ಅಭಿಮಾನಿಗಳ ವಿರುದ್ಧ ಟೀಕೆ ಮಾಡಿದ್ದರು. ಆರ್‌ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಚೆನ್ನೈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಜಿತೇಶ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಜಿತೇಶ್ ವೈರಲ್ ಆಗಿರುವ 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ' ಹಾಡನ್ನು ವ್ಯಂಗ್ಯವಾಗಿ ಹಾಡಿದ್ದಾರೆ.
ಟಾಸ್ ಗೆದ್ದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡರು. ಮೊದಲಿಗೆ ಆರ್‌ಸಿಬಿ ಬ್ಯಾಟಿಂಗ್ ಮಾಡಲು ಮುಂದಾಯಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜಿತೇಶ್ ಅವರು 6 ಎಸೆತಗಳಲ್ಲಿ 12 ರನ್ ಗಳಿಸಿ ನೂರ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿದರು. ಆಗ ಸಿಎಸ್‌ಕೆ ಅಭಿಮಾನಿಗಳು ಸೇಡು ತೀರಿಸಿಕೊಂಡಿದ್ದಾರೆ. ಜಿತೇಶ್ ಡ್ರೆಸ್ಸಿಂಗ್ ರೂಂಗೆ ಹಿಂತಿರುಗುತ್ತಿದ್ದಾಗ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಡಿಜೆ ಅದೇ ವೈರಲ್ ಹಾಡನ್ನು ಪ್ಲೇ ಮಾಡಿದ್ದಾರೆ.
21 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಬಳಿಸಿದ ಆಸ್ಟ್ರೇಲಿಯಾದ ಸೀಮರ್ ಜೋಶ್ ಹೇಜಲ್‌ವುಡ್ ಮತ್ತು 32 ಎಸೆತಗಳಲ್ಲಿ 51 ರನ್ ಗಳಿಸಿದ ನಾಯಕ ರಜತ್ ಪಾಟೀದಾರ್ ಅವರು ಆರ್‌ಸಿಬಿ ತಂಡದ ಗೆಲುವಿಗೆ ನೆರವಾದರು.
ಟೀಂ ಇಂಡಿಯಾದ ಟಿ20 ತಂಡಕ್ಕೆ ಪ್ರವೇಶಿಸುವ ಆಶಯ ಹೊಂದಿರುವ ರಜತ್ ಪಾಟೀದಾರ್ ಅವರಿಗೆ ತಂಡದ ಸಹ ಆಟಗಾರರು ಉತ್ತಮ ಬೆಂಬಲ ನೀಡಿದರು. ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿದರು. ನಿಗದಿತ ಓವರ್‌ಗಳಲ್ಲಿ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. 197 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಕೇವಲ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೇಜಲ್‌ವುಡ್ ಮತ್ತು ಭಾರತದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರ ದಾಳಿಗೆ ಚೆನ್ನೈ ತತ್ತರಿಸಿತು. ಯಶ್ ದಯಾಳ್ ಮೂರು ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು. ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ನಾಲ್ಕು ಓವರ್‌ಗಳ ಸ್ಪಿನ್‌ನಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು.
ಪಂದ್ಯದ ಬಳಿಕ ಮಾತನಾಡಿದ ಪಾಟೀದಾರ್, 'ಇದು ಬಹಳ ಮುಖ್ಯವಾದ ಇನಿಂಗ್ಸ್ ಆಗಿತ್ತು. ಚೆನ್ನೈನಲ್ಲಿ ನಾವು 200 ರನ್ ಗುರಿಯನ್ನು ಹೊಂದಿದ್ದೇವೆ. ಏಕೆಂದರೆ, ಅದನ್ನು ಚೇಸ್ ಮಾಡುವುದು ಸುಲಭವಲ್ಲ. ನಾನು ಪ್ರತಿ ಚೆಂಡನ್ನು ಗರಿಷ್ಠಗೊಳಿಸಲು ನೋಡುತ್ತೇನೆ. ನನ್ನ ಗುರಿ ಸ್ಪಷ್ಟವಾಗಿತ್ತು. ಹೇಜಲ್‌ವುಡ್ ಅವರ ಸ್ಪೆಲ್ ಪಂದ್ಯವನ್ನೇ ಬದಲಾಯಿಸಿತು' ಎಂದು ಹೇಳಿದರು.
Advertisement