
ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡವು 36 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವೇಗಿ ಪ್ರಸಿದ್ಧ್ ಕೃಷ್ಣ (2/18) ಅವರ ಅದ್ಭುತ್ ಸ್ಪೆಲ್‌ನೊಂದಿಗೆ ಸಾಯಿ ಸುದರ್ಶನ್ ಅವರ ಮಿಂಚಿನ ಅರ್ಧಶತಕವು ಪಂದ್ಯದ ದಿಕ್ಕನ್ನೇ ಬದಲಾಯಿಸಿತು.
ಈವರೆಗೆ ಮುಂಬೈ ಇಂಡಿಯನ್ಸ್ ಅಹಮಾದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 4 ಪಂದ್ಯಗಳನ್ನು ಆಡಿದ್ದು, 4 ರಲ್ಲೂ ಸೋಲು ಕಂಡಿದೆ. ಈ ಮೂಲಕ ತವರಿನಲ್ಲಿ ಗುಜರಾತ್ ಟೈಟಾನ್ಸ್ ಪ್ರಾಬಲ್ಯ ಸಾಧಿಸಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಆರಂಭಿಕರಾಗಿ ಬಂದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಸಾಯಿ ಸುದರ್ಶನ್ ಎರಡನೇ ಅರ್ಧಶತಕ ಗಳಿಸಿ ಮಿಂಚಿದರು.
197 ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ಗೆ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ ಅವರನ್ನು ಬೌಲ್ಡ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಮತ್ತೊಬ್ಬ ಆರಂಭಿಕ ಆಟಗಾರ ರಿಯಾನ್ ರಿಕಲ್‌ಸ್ಟನ್ ಅವರನ್ನೂ ಬೌಲ್ಡ್ ಮಾಡಿದರು. ನಂತರ ತಿಲಕ್ ವರ್ಮಾ 36 ಎಸೆತಗಳಲ್ಲಿ 39 ರನ್, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 48 ರನ್ ಗಳಿಸಿದರು. ಅಂತಿಮವಾಗಿ ಮುಂಬೈ ಆರು ವಿಕೆಟ್ ನಷ್ಟಕ್ಕೆ ಕೇವಲ 160 ರನ್ ಗಳಿಸಿತು.
ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದ ಗುಜರಾತ್ ಟೈಟಾನ್ಸ್ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಮುಂಬೈ ಇಂಡಿಯನ್ಸ್ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆಯಾಗಿದೆ. LSG ಯ ನಿಕೋಲಸ್ ಪೂರನ್ 145 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. CSKಯ ನೂರ್ ಅಹ್ಮದ್ ಏಳು ವಿಕೆಟ್ ಮೂಲಕ ಪರ್ಪಲ್ ಕ್ಯಾಪ್ ಮಾಲೀಕರಾಗಿದ್ದಾರೆ.
ಅಗ್ರಸ್ಥಾನದಲ್ಲಿ ಆರ್‌ಸಿಬಿ
ಐಪಿಎಲ್ 2025 ಪಂದ್ಯಾವಳಿಯಲ್ಲಿ ಆರ್‌ಸಿಬಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಾನು ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರೆ, ಮತ್ತೊಂದು ಸಿಎಸ್‌ಕೆ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ 2.266 ರನ್‌ರೇಟ್‌ನೊಂದಿಗೆ ಮೊದಲ ಸ್ಥಾನ ಕಾಯ್ದುಕೊಂಡಿದೆ. ಸನ್‌ರೈಸರ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 0.963 ರನ್‌ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಗುಜರಾತ್ ಜೈಂಟ್ಸ್ ತಂಡ ಮೂರನೇ ಸ್ಥಾನಕ್ಕೇರಿದೆ.
ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ. ಕೆಕೆಆರ್ 7ನೇ ಸ್ಥಾನದಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 8 ಮತ್ತು 9ನೇ ಸ್ಥಾನ ಪಡೆದಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ತಂಡ 10ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಲಾ ಎರಡು ಪಂದ್ಯಗಳನ್ನು ಆಡಿದ್ದು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ ಒಂದು ಪಂದ್ಯಗಳನ್ನು ಆಡಿವೆ.
ಗುಜರಾತ್ ಟೈಟಾನ್ಸ್ ಏಪ್ರಿಲ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೆಣಸಲಿದೆ.
Advertisement