
ಹೈದರಾಬಾದ್: ಐಪಿಎಲ್ ಕಾಂಪ್ಲಿಮೆಂಟರಿ ಟಿಕೆಟ್‌ಗಾಗಿ ಸನ್‌ರೈಸರ್ಸ್ ಹೈದರಾಬಾದ್ (SRH) ಮ್ಯಾನೇಜ್‌ಮೆಂಟ್‌ಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ವಿಜಿಲೆನ್ಸ್ ನಿರ್ದೇಶಕರಿಗೆ ತೆಲಂಗಾಣ ಸರ್ಕಾರ ಆದೇಶಿಸಿದೆ.
HCA ವಿರುದ್ಧದ ಆರೋಪಗಳು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ (CMO)ಎಚ್ಚರಿಸಿದೆ.
ಪರಿಸ್ಥಿತಿ ಸುಧಾರಿಸದಿದ್ದರೆ ಬೇರೆ ಸ್ಥಳವನ್ನು ಹುಡುಕಿಕೊಳ್ಳುವಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA)ಅಧ್ಯಕ್ಷ ಜಗನ್ ಮೋಹನ್ ರಾವ್ ಬೆದರಿಕೆ ಹಾಕಿರುವುದಾಗಿ SRH ತಂಡದ ಜನರಲ್ ಮ್ಯಾನೇಜರ್ (ಕ್ರೀಡಾ) T.B.ಶ್ರೀನಾಥ್ ಹೇಳಿದ ನಂತರ ಈ ವಿವಾದ ಬೆಳಕಿಗೆ ಬಂದಿತು.
ಏನಿದು ಒಪ್ಪಂದ? ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನೊಂದಿಗೆ 12 ವರ್ಷಗಳಿಂದ ಸಹಯೋಗ ಹೊಂದಿದ್ದೇವೆ ಆದರೆ ಕಳೆದ ಎರಡು ಸೀಸನ್ ಗಳಿಂದ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಒಪ್ಪಂದದ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಶೇ. 10 ರಷ್ಟು (3,900) ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಎಚ್‌ಸಿಎಗೆ ಹಂಚಿಕೆ ಮಾಡುತ್ತದೆ. ಇದರಲ್ಲಿ 50 ಸೀಟುಗಳ ಸಾಮರ್ಥ್ಯದ ಕಾರ್ಪೊರೇಟ್ ಬಾಕ್ಸ್‌ಗೂ ಪ್ರವೇಶ ಇರುತ್ತದೆ.
ಆರೋಪ ನಿರಾಕರಿಸಿದ HCA : ಆದಾಗ್ಯೂ, ಈ ವರ್ಷ ಕಾರ್ಪೊರೇಟ್ ಬಾಕ್ಸ್ ನಲ್ಲಿ 30 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೊಂಡಿದೆ. ಮತ್ತೊಂದು ಬಾಕ್ಸ್‌ನಿಂದ ಹೆಚ್ಚುವರಿ 20 ಟಿಕೆಟ್‌ಗಳ ಬೇಡಿಕೆ ಇಟ್ಟಿದೆ. ಇದು SRH ಅಸಮಾಧಾನಕ್ಕೆ ಕಾರಣವಾಗಿದೆ.
ಕಿರುಕುಳ ಆರೋಪ ಕುರಿತು ಪ್ರತಿಕ್ರಿಯಿಸಿರುವ HCA, ಈ ಸಂಬಂಧ SRH ಮ್ಯಾನೇಜ್ ಮೆಂಟ್ ನಿಂದ ಯಾವುದೇ ಅಧಿಕೃತ ಇಮೇಲ್‌ಗಳನ್ನು ಸ್ವೀಕರಿಸಿಲ್ಲ. ಇದು HCA-SRH ನ ಖ್ಯಾತಿಗೆ ಕಳಂಕ ತರಲು ಕೆಲವು ವ್ಯಕ್ತಿಗಳ ದುರುದ್ದೇಶಪೂರಿತ ಪ್ರಚಾರವಾಗಿದೆ ಎಂದು ಆರೋಪಿಸಿದೆ.
Advertisement