
ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅದ್ಭುತ ಪ್ರದರ್ಶನ ನೀಡುತ್ತಿದೆ. ಕೋಲ್ಕತ್ತಾ ಮತ್ತು ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್ ಸಿಬಿ ಅಭಿಮಾನಿಗಳ ಬಳಗ ಚಿಕ್ಕದೇನಲ್ಲ. ದೇಶಾದ್ಯಂತ ಆರ್ ಸಿಬಿ ಅಭಿಮಾನಿಗಳನ್ನು ಹೊಂದಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ, ಹೈದರಾಬಾದ್ ನಲ್ಲಿ ನಡೆದ Delhi Capitals ಮತ್ತು SunRisers Hyderabad ನಡುವಿನ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಆರ್ ಸಿಬಿ ಆರ್ ಸಿಬಿ ಘೋಷಣೆಗಳು ಮೊಳಗಿದವು. ಈ ಸಂಬಂಧ ವಿಡಿಯೋವೊಂದು ವೈರಲ್ ಆಗುತ್ತಿದೆ.
ಮತ್ತೊಂದೆಡೆ ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ತವರು ಮೈದಾನವಾದ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆಡಗೆ ಸ್ಥಳಾಂತರಿಸಲು ಯೋಚಿಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಜೊತೆಗಿನ ನಿರಂತರ ವಿವಾದಗಳು ಎಂದು ಹೇಳಲಾಗುತ್ತಿದೆ. SRH ಫ್ರಾಂಚೈಸಿ HCA ವಿರುದ್ಧ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನ ಉನ್ನತ ಅಧಿಕಾರಿಗಳು ಉಚಿತ ಟಿಕೆಟ್‌ಗಳಿಗಾಗಿ SRH ಫ್ರಾಂಚೈಸಿಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ಇದೀಗ ಎಸ್ಆರ್ಹೆಚ್ ತಂಡ ಉಳಿದಿರುವ ತನ್ನ ತವರು ಪಂದ್ಯಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್ ಗಳನ್ನು ಹೊಂದಿರುವ ತಂಡ ಎಂದು ಬೀಗುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮತ್ತೊಂದು ಮುಖಭಂಗ ಎದುರಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ಅಂತರದ ಹೀನಾಯ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ನ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ರ ಬೌಲಿಂಗ್ ದಾಳಿಗೆ ತತ್ತರಿಸಿ 18.4 ಓವರ್ ನಲ್ಲೇ 163 ರನ್ ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಡೆಲ್ಲಿ ತಂಡ 16 ಓವರ್ ನಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
Advertisement