
ವಿಶಾಖಪಟ್ಟಣಂ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್ ಗಳನ್ನು ಹೊಂದಿರುವ ತಂಡ ಎಂದು ಬೀಗುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮತ್ತೊಂದು ಮುಖಭಂಗ ಎದುರಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ ಅಂತರದ ಹೀನಾಯ ಸೋಲು ಕಂಡಿದೆ.
ಇಂದು ವಿಶಾಖಪಟ್ಟಣಂನ ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಬೃಹತ್ ಮೊತ್ತ ಪೇರಿಸುವ ಗುರಿಯೊಂದಿಗೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ರ ಬೌಲಿಂಗ್ ದಾಳಿಗೆ ತತ್ತರಿಸಿ 18.4 ಓವರ್ ನಲ್ಲೇ 163 ರನ್ ಗಳಿಗೆ ಆಲೌಟ್ ಆಯಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಉದಯೋನ್ಮುಖ ಆಟಗಾರ ಅನಿಕೇತ್ ವರ್ಮಾ 41 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಿತ 74 ರನ್ ಸಿಡಿಸಿ ತಮ್ಮ ತಂಡದ ಪರ ಏಕಾಂಗಿ ಪ್ರದರ್ಶನ ನೀಡಿದರು. ಟ್ರಾವಿಸ್ ಹೆಡ್ 22 ರನ್ ಮತ್ತು ಕ್ಲಾಸನ್ 32 ರನ್ ಗಳಿಸಿದ್ದು ಬಿಟ್ಟರೆ ಹೈದರಾಬಾದ್ ತಂಡದ ಇತರೆ ಆಟಗಾರರಿಂದ ಹೇಳಿಕೊಳ್ಳುವ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ.
ಇನ್ನು ಬೌಲಿಂಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅದ್ಭುತ ಸ್ಪೆಲ್ ಮಾಡಿದರು. ಸ್ಟಾರ್ಕ್ 3.4 ಓವರ್ ಎಸೆದು 9.50 ಸರಾಸರಿಯಲ್ಲಿ 35 ರನ್ ನೀಡಿ 5 ವಿಕೆಟ್ ಪಡೆದರು. ಅವರಿಗೆ ಕುಲದೀಪ್ ಯಾದವ್ ಉತ್ತಮ ಸಾಥ್ ನೀಡಿದರು. ಕುಲದೀಪ್ ಕೂಡ 4 ಓವರ್ ಎಸೆದು ಕೇವಲ 5.50 ಸರಾಸರಿಯಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಮೋಹಿತ್ ಶರ್ಮಾ 1 ವಿಕೆಟ್ ಪಡೆದರು.
ಡೆಲ್ಲಿ ಭರ್ಜರಿ ಬ್ಯಾಟಿಂಗ್
ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಡೆಲ್ಲಿ ಪರ ಆರಂಭಿಕರಾದ ಜೇಕ್ ಫ್ರೇಸರ್ ಮ್ಯಾಕ್ ಗ್ರಕ್ 38 ರನ್ ಗಳಿಸಿದರೆ, ಫಾಫ್ ಡುಪ್ಲೆಸಿಸ್ 50 ರನ್ ಸಿಡಿಸಿದರು.
ಕೆಎಲ್ ರಾಹುಲ್ 15 ರನ್ ಗಳಿಸಿ ಔಟಾದರೆ, ಅಜೇಯ 34 ರನ್ ಗಳಿಸಿದ ಅಭಿಷೇಕ್ ಪೊರೆಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 21 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಕ್ತಾಯ ಮಾಡಿದರು. ಅಂತಿಮವಾಗಿ ಡೆಲ್ಲಿ ತಂಡ 16 ಓವರ್ ನಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
5 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಡೆಲ್ಲಿ ತಂಡದ ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement