
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಸೋಲು ಕಂಡಿದೆ. ಪಂದ್ಯದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ (ಎಂಐ) ನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ 15-20 ರನ್‌ಗಳಿಂದ ಹಿಂದುಳಿದಿದೆ ಮತ್ತು ಕಠಿಣ ಪಿಚ್‌ನಲ್ಲಿ ನಿಧಾನಗತಿಯ ಎಸೆತಗಳನ್ನು ಎದುರಿಸುವುದು ಕಷ್ಟಕರವಾಗಿತ್ತು ಎಂದಿದ್ದಾರೆ. ಕಳೆದ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್‌ನಿಂದಾಗಿ ಒಂದು ಪಂದ್ಯಕ್ಕೆ ನಿಷೇಧ ಹೇರಿದ ಬಳಿಕ ಹಾರ್ದಿಕ್ ಸಿಎಸ್‌ಕೆ ವಿರುದ್ಧದ ಮೊದಲನೇ ಪಂದ್ಯದಿಂದ ಹೊರಗುಳಿದಿದ್ದರು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಿಟಿ ವಿರುದ್ಧ 36 ರನ್‌ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಐಪಿಎಲ್ 2025ರ ಆರಂಭದಿಂದಲೂ ಎರಡು ಪಂದ್ಯಗಳಲ್ಲಿ ಕೇವಲ 8 ರನ್ ಗಳಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಹಾರ್ದಿಕ್, 'ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ 15-20 ರನ್‌ಗಳ ಕೊರತೆಯನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಮೈದಾನದಲ್ಲಿ ವೃತ್ತಿಪರರಾಗಿರಲಿಲ್ಲ, ನಾವು ಮೂಲಭೂತ ತಪ್ಪುಗಳನ್ನು ಮಾಡಿದ್ದೇವೆ ಮತ್ತು ಅದು ನಮಗೆ 20-25 ರನ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿತು. T20 ಪಂದ್ಯದಲ್ಲಿ, ಅದು ತುಂಬಾ ಹೆಚ್ಚು. ಅವರು (GT ಆರಂಭಿಕರು) ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅವರು ಹೆಚ್ಚಿನ ಅವಕಾಶಗಳನ್ನು ತೆಗೆದುಕೊಳ್ಳಲಿಲ್ಲ, ಅವರು ಸರಿಯಾದ ಕೆಲಸಗಳನ್ನು ಮಾಡಿದರು ಮತ್ತು ಅವರು ಅನೇಕ ಅಪಾಯಕಾರಿ ಹೊಡೆತಗಳನ್ನು ಆಡದೆ ರನ್ ಗಳಿಸಿದರು' ಎಂದರು.
ಸದ್ಯ, ನಾವೆಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದಿನ್ನೂ ಆರಂಭಿಕ ಹಂತವಾಗಿದ್ದು, ಬ್ಯಾಟರ್‌ಗಳು ಪಾರ್ಟಿಗೆ ಬರಬೇಕು. ಶೀಘ್ರದಲ್ಲೇ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸುತ್ತೇನೆ. ಈ ವಿಕೆಟ್‌ನಲ್ಲಿ, ಅವರ ಸ್ಲೋವರ್ ಡೆಲಿವರೀಸ್ ಅತ್ಯಂತ ಕಠಿಣವಾಗಿದ್ದವು. ಬ್ಯಾಟರ್‌ಗಳಿಗೆ ಕಷ್ಟವಾಗಿತ್ತು ಎಂದು ಹೇಳಿದರು.
ಟಾಸ್ ಗೆದ್ದ ಮುಂಬೈ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಆರಂಭಿಕರಾದ ಶುಭಮನ್ ಗಿಲ್ (27 ಎಸೆತಗಳಲ್ಲಿ 38, ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್) ಮತ್ತು ಸಾಯಿ ಸುದರ್ಶನ್ 78 ರನ್‌ಗಳ ಜೊತೆಯಾಟ ತಂಡಕ್ಕೆ ಉತ್ತಮ ಆರಂಭ ಒದಗಿಸಿತು. ಸುದರ್ಶನ್ ಮತ್ತು ಜೋಸ್ ಬಟ್ಲರ್ (24 ಎಸೆತಗಳಲ್ಲಿ 39, ಐದು ಬೌಂಡರಿ ಮತ್ತು ಒಂದು ಸಿಕ್ಸರ್) ನಡುವೆ ಮತ್ತೊಂದು ಅರ್ಧಶತಕದ ಜೊತೆಯಾಟ ನಡೆಯಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.
197 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ (8) ಮತ್ತು ರಿಯಾನ್ ರಿಕಲ್ಟನ್ ವಿಕೆಟ್ ಒಪ್ಪಿಸಿದರು. ತಿಲಕ್ ವರ್ಮಾ (36 ಎಸೆತಗಳಲ್ಲಿ 39, ಮೂರು ಬೌಂಡರಿ ಮತ್ತು ಒಂದು ಸಿಕ್ಸರ್) ಮತ್ತು ಸೂರ್ಯಕುಮಾರ್ ಯಾದವ್ (28 ಎಸೆತಗಳಲ್ಲಿ 48, ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್) ಮುಂಬೈ ಪರ 62 ರನ್‌ಗಳ ಜೊತೆಯಾಟ ಆಡಿದರು. ಇವರಿಬ್ಬರು ಔಟಾದ ನಂತರ, ಮುಂಬೈ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಕೇವಲ 160 ರನ್ ಗಳಿಸಲು ಶಕ್ತವಾಯಿತು.
ಪ್ರಸಿದ್ಧ್ ಕೃಷ್ಣ (2/18) ಮತ್ತು ಮೊಹಮ್ಮದ್ ಸಿರಾಜ್ (2/34) ಜಿಟಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು. ಕಗಿಸೋ ರಬಾಡ ಮತ್ತು ಸಾಯಿ ಕಿಶೋರ್ ಕೂಡ ತಲಾ ಒಂದು ವಿಕೆಟ್ ಪಡೆದರು.
Advertisement