'ಸಾಧ್ಯವಾದರೆ ಎಲ್ಲರನ್ನೂ ಉಳಿಸಿಕೊಳ್ಳಿ': ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ
ಜೈಪುರ: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ, ಗುರುವಾರ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಭದ್ರತಾ ಸಂಸ್ಥೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 16ರಂದು ಇಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಅಂತಿಮ ಐಪಿಎಲ್ ಪಂದ್ಯ ನಡೆಯಲಿದ್ದು, ಇದಕ್ಕೆ ಕೆಲವು ದಿನಗಳ ಮೊದಲು ಗುರುವಾರ ಬೆಳಿಗ್ಗೆ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ ಎಂದು ರಾಜಸ್ಥಾನ ಕ್ರೀಡಾ ಮಂಡಳಿ ಅಧ್ಯಕ್ಷ ನೀರಜ್ ಕೆ ಪವನ್ ತಿಳಿಸಿದ್ದಾರೆ.
'ಆಪರೇಷನ್ ಸಿಂಧೂರದ ಯಶಸ್ಸಿಗಾಗಿ ನಾವು ನಿಮ್ಮ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟ ಮಾಡುತ್ತೇವೆ. ಸಾಧ್ಯವಾದರೆ ಎಲ್ಲರನ್ನೂ ಉಳಿಸಿಕೊಳ್ಳಿ' ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.
ಕ್ರೀಡಾಂಗಣಕ್ಕೆ ತಕ್ಷಣವೇ ಪೊಲೀಸರು, ಕ್ಷಿಪ್ರ ಕಾರ್ಯಪಡೆ ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿವೆ.
ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶ ಮತ್ತು ಕಟ್ಟಡಗಳನ್ನು ಶೋಧಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಸೈಬರ್ ಪೊಲೀಸ್ ವಿಭಾಗವು ಇ-ಮೇಲ್ ಕಳುಹಿಸಿದವರು ಯಾರೆಂದು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕುನ್ವರ್ ರಾಷ್ಟ್ರದೀಪ್ ತಿಳಿಸಿದ್ದಾರೆ.
ಬುಧವಾರ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿಯೇ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧಿಕೃತ ಖಾತೆಗೆ ಇದೇ ರೀತಿಯ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.
ಏಪ್ರಿಲ್ 22ರಂದು ನಡೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ' ಅಡಿಯಲ್ಲಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಈ ಬೆದರಿಕೆ ಮೇಲ್‌ಗಳು ಬಂದಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ