
ಬೆಂಗಳೂರು: ವಿರಾಟ್ ಕೊಹ್ಲಿ, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಹೆಸರು. ಏಕದಿನ, ಟೆಸ್ಟ್, ಟಿ-20 ಸೇರಿದಂತೆ ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ಅವರೊಬ್ಬ ಸಾಧಕ. ಅಲ್ಲದೇ ಅವರ ಓವರ್ ಅಗ್ರೇಷನ್, ಸೆಲೆಬ್ರೇಶನ್ ನೋಡಲೆಂದೇ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣಕ್ಕೆ ದಾಂಗುಡಿ ಇಡುತ್ತಿದ್ದರು.
ವಿಕೆಟ್ ಗಳ ನಡುವೆ ರನ್ ಕದಿಯಲು ಚಿಗರೆಯಂತೆ ಓಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಕೆಲವು ಇನ್ನಿಂಗ್ಸ್ ಗಳಲ್ಲಿ ಅವರು ವೈಫಲ್ಯಕ್ಕೊಳಗಾದಾಗ, ಇನ್ನು ಕೊಹ್ಲಿಯ ಕಾಲ ಮುಗಿಯಿತು ಎಂಬ ಟೀಕಾಕಾರರಿಗೆ ಅಮೋಘ ಇನ್ನಿಂಗ್ಸ್ ಒಂದನ್ನು ಕಟ್ಟಿ ಬ್ಯಾಟಿನಿಂದಲೇ ಉತ್ತರ ನೀಡಿದ್ದಾರೆ. ಆದರೆ ಅವರ ಇತ್ತೀಚಿನ ನಿರ್ಧಾರವೊಂದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ವಿದಾಯದ ಪಂದ್ಯವಿಲ್ಲದೆ ಮೇ 12 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇದ್ದರೂ ಅವರ ದಿಢೀರ್ ನಿರ್ಧಾರ, ಅಭಿಮಾನಿಗಳಲ್ಲಿ ದು:ಖಕ್ಕೆ ಕಾರಣವಾಗಿದೆ. ಹೀಗಾಗಿಯೇ ಇದೀಗ RCB ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಮುಂದಾಗಿದ್ದಾರೆ.
ಹೌದು. ಮೇ 17 ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸುವ ಎಲ್ಲಾ ಅಭಿಮಾನಿಗಳು ವೈಟ್ ಟಿ ಶರ್ಟ್ ಧರಿಸಿ ಆಗಮಿಸಬೇಕೆಂದು ಆರ್ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶವಾಗಿದೆ. ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದ ವೇಳೆ ಆರ್ಸಿಬಿ ತಂಡದ ಕೆಂಪು ಕೋಟೆ ಶ್ವೇತವಸ್ತ್ರದಿಂದ ಕಂಗೊಳಿಸಲಿದೆ
Advertisement