
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜಾಶ್ ಹೇಜಲ್‌ವುಡ್ ಐಪಿಎಲ್ 2025 ಪುನರಾರಂಭವಾಗುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಲು ಭಾರತಕ್ಕೆ ಮರಳಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಭಾರತಮ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಒಂದು ವಾರ ಐಪಿಎಲ್ ಅನ್ನು ಸ್ಥಗಿತಗೊಳಿಸಿತ್ತು. ಇದೀಗ ಮೇ 17 ರಂದು ಐಪಿಎಲ್ ಪುನರಾರಂಭವಾಗುತ್ತಿದ್ದು, ವೇಗದ ಬೌಲರ್ ಶೀಘ್ರದಲ್ಲೇ ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಯಾವಾಗ ಹಿಂದಿರುಗಲಿದ್ದಾರೆ ಎಂಬುದು ದೃಢಪಟ್ಟಿಲ್ಲ.
ಐಪಿಎಲ್ ಸ್ಥಗಿತಗೊಂಡ ನಂತರ ಜಾಶ್ ಹೇಜಲ್‌ವುಡ್ ತಮ್ಮ ತವರು ರಾಷ್ಟ್ರಕ್ಕೆ ಮರಳಿದ್ದರು. ಜೂನ್ 3 ರಂದು ಫೈನಲ್ ನಡೆಯಲಿದ್ದು, ಭುಜದ ಗಾಯದಿಂದಾಗಿ ಹೇಜಲ್‌ವುಡ್ ಆರ್‌ಸಿಬಿಯ ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವ ಹೇಜಲ್‌ವುಡ್, RCBಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು.
ಇದೀಗ ಅವರು ಬಂದರೆ ಆರ್‌ಸಿಬಿಗೆ ದೊಡ್ಡ ಬಲ ಬಂದಂತಾಗುತ್ತದೆ. ಅವರು 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ತಮ್ಮ ತಂಡಕ್ಕೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
'ಹೌದು, ಜಾಶ್ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಬರುವ ನಿಖರವಾದ ದಿನಾಂಕದ ಕುರಿತು ನಾವು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ' ಎಂದು ಹೆಸರು ಬಹಿರಂಗಪಡಿಸಲು ಬಯಸದ ಹೇಜಲ್‌ವುಡ್‌ಗೆ ಹತ್ತಿರವಿರುವ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ.
ಈಮಧ್ಯೆ, ಆಸ್ಟ್ರೇಲಿಯಾದ ಸೀಮ್-ಬೌಲಿಂಗ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಅವರು ಮೇ 24 ರಂದು ಜೈಪುರದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಐಪಿಎಲ್ 2025 ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಜೊತೆ ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಗುರುವಾರ ಐಎಎನ್‌ಎಸ್‌ಗೆ ಮೂಲಗಳು ತಿಳಿಸಿವೆ.
ಈಗ, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅಜ್ಮತುಲ್ಲಾ ಒಮರ್‌ಜೈ ಮತ್ತು ಮಿಚೆಲ್ ಓವನ್ ಅವರು ಮೇ 17 ರಿಂದ ಪ್ರಾರಂಭವಾಗುವ ಐಪಿಎಲ್ 2025 ರ ಉಳಿದ ಪಂದ್ಯಗಳನ್ನು ಆಡುವುದಾಗಿ ಪಿಬಿಕೆಎಸ್‌ಗೆ ದೃಢಪಡಿಸಿದ್ದಾರೆ ಎಂದು ಐಎಎನ್‌ಎಸ್ ತಿಳಿಸಿದೆ.
Advertisement