
ನವದೆಹಲಿ: ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಗುಜರಾತ್ ಟೈಟನ್ಸ್ ಪ್ಲೇ ಆಫ್ ತಲುಪಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆ.ಎಲ್. ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 199 ರನ್ ಸೇರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 112 ರನ್ ಗಳಿಸಿದರು.
200 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್, ಸಾಯಿ ಸುದರ್ಶನ್(108) ಅವರ ಶತಕ ಹಾಗೂ ಶುಭಮನ್ ಗಿಲ್(93) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ಓವರ್ ಗಳಲ್ಲಿ 205 ರನ್ ಗಳಿಸುವ ಮೂಲಕ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಪ್ಲೇ ಆಫ್ ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಆರ್ಸಿಬಿ ಜೊತೆಗೆ ಹಾಗೂ ಪಂಜಾಬ್ ಕಿಂಗ್ಸ್ ಕೂಡ ಪ್ಲೇ-ಆಫ್ಗೆ ಎಂಟ್ರಿ ನೀಡಿವೆ. ಈ ಮೂರು ತಂಡಗಳು ಪ್ಲೇ-ಆಫ್ನಲ್ಲಿ ಆಡೋದು ಖಚಿತವಾಗಿದ್ದು, ಆದರೆ ತಂಡಗಳ ಸ್ಥಾನ ಇನ್ನೂ ನಿರ್ಧಾರವಾಗಿಲ್ಲ.
ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.ಇನ್ನು, ಮೊದಲ ಸ್ಥಾನದಲ್ಲಿದ್ದ ಆರ್ಸಿಬಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಸೋಲಿಸುವ ಮೂಲಕ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂರೂ ತಂಡಗಳಿಗೂ ತಲಾ ಎರಡೆರಡು ಪಂದ್ಯಗಳಿವೆ. ಈ ಪಂದ್ಯಗಳಲ್ಲಿ ಸೋಲು, ಗೆಲುವಿನ ಆಧಾರದ ಮೇಲೆ ಪ್ಲೇ-ಆಫ್ನ ಸ್ಥಾನ ನಿರ್ಧಾರ ಆಗಲಿದೆ.
ಪ್ರಸ್ತುತ ಗುಜರಾತ್ ಮತ್ತು ಆರ್ಸಿಬಿ ಮೊದಲ ಎರಡು ಸ್ಥಾನಗಳಲ್ಲಿವೆ ಇವೆ. 12 ಪಂದ್ಯ ಆಡಿರುವ ಗುಜರಾತ್ 9 ಮ್ಯಾಚ್ ಗೆದ್ದು 18 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. 12 ಪಂದ್ಯದಲ್ಲಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ 18 ಅಂಕದೊಂದಿಗೆ ನೆಟ್ ರನ್ ರೇಟ್ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಪಂಜಾಬ್ ಕಿಂಗ್ಸ್ ಕೂಡ 8 ಪಂದ್ಯ ಗೆದ್ದು ಮೂರನೇ ಸ್ಥಾನದಲ್ಲಿದೆ. ಇನ್ನು ಕೊನೆಯ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಟ ನಡೆಸಲಿವೆ. ಡೆಲ್ಲಿ ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶವನ್ನು ಪಡೆಯಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು.
Advertisement