
ಐಪಿಎಲ್ ನೀತಿ ಸಂಹಿತೆಯನ್ನು ಪದೇ ಪದೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಸ್ಪಿನ್ನರ್ ದಿಗ್ವೇಶ್ ರಾಠಿ ಅವರನ್ನು ಅಮಾನತುಗೊಳಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿಯು ಒಂದು ಪಂದ್ಯಕ್ಕೆ ದಿಗ್ವೇಶ್ ರಾಠಿ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಎಲ್‌ಎಸ್‌ಜಿ ಪರವಾಗಿ ವಿಕೆಟ್ ಪಡೆದ ನಂತರ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದಕ್ಕಾಗಿ ರಾಠಿ ಅವರಿಗೆ ಈಗಾಗಲೇ ಎರಡು ಬಾರಿ ದಂಡ ವಿಧಿಸಲಾಗಿದೆ. ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ದಿಗ್ವೇಶ್ ರಾಠಿ ಅವರು ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಿತ್ತ ನಂತರ ಸಂಭ್ರಮಾಚರಣೆ ನಡೆಸಿದ ರಾಠಿ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಅಂಪೈರ್‌ಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.
ಈ ಆವೃತ್ತಿಯಲ್ಲಿ ಮೂರನೇ ಬಾರಿಗೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಿಗ್ವೇಶ್ ತಪ್ಪಿತಸ್ಥರೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಪು ನೀಡಿದ್ದು, ಸ್ಪಿನ್ನರ್‌ಗೆ ಪಂದ್ಯ ಶುಲ್ಕದ ಶೇ 50 ರಷ್ಟು ದಂಡ ವಿಧಿಸಲಾಗಿದೆ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಎಲ್‌ಎಸ್‌ಜಿಯ ಮುಂದಿನ ಪಂದ್ಯದಿಂದ ಅಮಾನತುಗೊಳಿಸಲಾಗಿದೆ.
'ಈ ಆವೃತ್ತಿಯಲ್ಲಿ ಆರ್ಟಿಕಲ್ 2.5 ರ ಅಡಿಯಲ್ಲಿ ಇದು ಅವರ ಮೂರನೇ ಲೆವೆಲ್ 1 ಅಪರಾಧವಾಗಿದೆ. ಆದ್ದರಿಂದ, ಅವರಿಗೆ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ. ಜೊತೆಗೆ ಅವರು ಮೊದಲು ಏಪ್ರಿಲ್ 01 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಮತ್ತು ಏಪ್ರಿಲ್ 04 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದರು' ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
'ಈಗ ಅವರು ಈ ಆವೃತ್ತಿಯಲ್ಲಿ ಐದು ಡಿಮೆರಿಟ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ದಿಗ್ವೇಶ್ ಅವರನ್ನು ಮೇ 22 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ LSG ಯ ಮುಂದಿನ ಪಂದ್ಯದಿಂದ ಅಮಾನತುಗೊಳಿಸಲಾಗುತ್ತದೆ' ಎಂದು ತಿಳಿಸಿದೆ.
ಅಭಿಷೇಕ್ ಶರ್ಮಾಗೂ ದಂಡ
ಪಂದ್ಯದ ಸಮಯದಲ್ಲಿ ದಿಗ್ವೇಶ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ SRH ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರಿಗೂ ಬಿಸಿಸಿಐ ದಂಡ ವಿಧಿಸಿದೆ.
'ಸೋಮವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್‌ನ ಆಲ್‌ರೌಂಡರ್ ಅಭಿಷೇಕ್ ಶರ್ಮಾ ಅವರಿಗೆ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಆರ್ಟಿಕಲ್ 2.6 ರ ಅಡಿಯಲ್ಲಿ ಇದು ಅವರ ಮೊದಲ ಲೆವೆಲ್ 1 ಅಪರಾಧವಾಗಿದೆ. ಆದ್ದರಿಂದ, ಅವರು ಒಂದು ಡಿಮೆರಿಟ್ ಪಾಯಿಂಟ್ ಅನ್ನು ಗಳಿಸಿದ್ದಾರೆ' ಎಂದು ಹೇಳಿದೆ.
Advertisement