
ಐಪಿಎಲ್ 2025ನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗಾಗಲೇ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದೆ. ಕಳೆದ ಎರಡು ಪಂದ್ಯಗಳಲ್ಲಿ ತಂಡದಿಂದ ದೂರ ಉಳಿದಿದ್ದ ಪ್ರಮುಖ ವೇಗಿ ಜಾಶ್ ಹೇಜಲ್‌ವುಡ್ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಆರ್‌ಸಿಬಿ ಮೇ 23 ರಂದು ಸನ್‌ರೈಸರ್ಸ್ (SRH) ಮತ್ತು ಮೇ 27 ರಂದು ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಎದುರಿಸಲಿದೆ. ಭುಜದ ನೋವಿನಿಂದಾಗಿ ಕಳೆದ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಹೇಜಲ್‌ವುಡ್ ಮತ್ತೆ ತಂಡಕ್ಕೆ ಮರಳಲು ಸಜ್ಜಾಗಿದ್ದು, ಈಗಾಗಲೇ ನೆಟ್ಸ್‌ನಲ್ಲಿ ಬೌಲಿಂಗ್ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ವಿವಿಧ ವರದಿಗಳ ಪ್ರಕಾರ, ಹೇಜಲ್‌ವುಡ್ ಈ ವಾರಾಂತ್ಯದ ವೇಳೆಗೆ RCB ಜೊತೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಅವರು ಬ್ರಿಸ್ಬೇನ್‌ನಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಆಸ್ಟ್ರೇಲಿಯಾದ ವೇಗಿ ಶುಕ್ರವಾರ (ಮೇ 23) SRH ವಿರುದ್ಧದ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಮತ್ತು IPL 2025 ಪ್ಲೇಆಫ್ ಪಂದ್ಯಗಳಿಗೂ ಸ್ವಲ್ಪ ಮೊದಲು ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.
ಈ ಆವೃತ್ತಿಯಲ್ಲಿ ಹೇಜಲ್‌ವುಡ್ ಆರ್‌ಸಿಬಿಯ ಅತ್ಯುತ್ತಮ ಬೌಲರ್ ಆಗಿದ್ದಾರೆ. ಅವರು ಇಲ್ಲಿಯವರೆಗೆ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಸರಾಸರಿ 17.27. ಈಮಧ್ಯೆ, ಸೋಮವಾರ, ಲುಂಗಿ ಎನ್‌ಗಿಡಿ ಅವರ ಬದಲಿಗೆ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಕರೆತಂದಿರುವುದಾಗಿ ಆರ್‌ಸಿಬಿ ಘೋಷಿಸಿತು.
ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಮತ್ತು ಎನ್‌ಗಿಡಿ ಅವರಂತಹ ಆಟಗಾರರು ಪ್ಲೇಆಫ್‌ಗಳಿಗೆ ಮುಂಚಿತವಾಗಿ ತಂಡವನ್ನು ತೊರೆಯಲಿದ್ದು, ಹೇಜಲ್‌ವುಡ್ ಆರ್‌ಸಿಬಿ ಸೇರಲಿದ್ದಾರೆ ಎನ್ನಲಾಗಿದೆ.
RCB vs SRH ಪಂದ್ಯ ಸ್ಥಳಾಂತರ
ಬೆಂಗಳೂರಿನ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು SRH ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಮೇ 19ರಂದು ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಆಡಿತು ಮತ್ತು ಬೆಂಗಳೂರಿಗೆ ಬರಲು ಹೊರಟಿತ್ತು. ಆದರೆ, ಬಿಸಿಸಿಐ ಅವರಿಗೆ ಲಕ್ನೋದಲ್ಲೇ ಇರಲು ತಿಳಿಸಿದೆ. ಇತ್ತ ಆರ್‌ಸಿಬಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತಂಡ ಲಕ್ನೋಗೆ ಪ್ರಯಾಣ ಬೆಳೆಸಲಿದೆ.
Advertisement