
ನವದೆಹಲಿ: ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2025 ಪಂದ್ಯದಲ್ಲಿ ನಿಧಾನಗತಿ ಓವರ್ ಕಾರಣದಿಂದ ಪ್ಯಾಟ್ ಕಮ್ಮಿನ್ಸ್, ರಜತ್ ಪಾಟಿದಾರ್ ಗೆ ಭಾರಿ ದಂಡ ವಿಧಿಸಲಾಗಿದೆ.
ಪಾಟಿದಾರ್ ನಿನ್ನೆಯ ಪಂದ್ಯದಲ್ಲಿ ನಾಯಕತ್ವ ವಹಿಸಿರಲಿಲ್ಲ. ಇಂಫ್ಯಾಕ್ಟ್ ಪ್ಲೇಯರ್ ಆಗಿದ್ದರು. ಆದಾಗ್ಯೂ, ತಂಡದ ನಿಯೋಜಿತ ಕ್ಯಾಪ್ಟನ್ ಆಗಿರುವುದರಿಂದ ಅವರಿಗೆ ರೂ. 24 ಲಕ್ಷ ದಂಡ ವಿಧಿಸಲಾಗಿದೆ. ಈ ಬಾರಿ ಇದು ಎರಡನೇ ಬಾರಿಗೆ ಆರ್ ಸಿಬಿಗೆ ದಂಡ ಬಿದ್ದಿದೆ. ಈ ಹಿಂದೆ ಏಪ್ರಿಲ್ 7 ರಂದು ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿತ್ತು.
ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯದ ನಾಯಕರಾಗಿಲ್ಲದಿದ್ದರೂ ನಿಯೋಜಿತ ಕ್ಯಾಪ್ಟನ್ ದಂಡ ಭರಿಸಬೇಕಾಗುತ್ತದೆ. ಈ ಹಿಂದೆ ರಾಜಸ್ಥಾನ ರಾಯಲ್ಸ್ ನ ರಿಯಾನ್ ಪರಾಗ್ ಬದಲಿಗೆ ಸಂಜು ಸ್ಯಾಮ್ಸನ್ ಗೆ ದಂಡ ವಿಧಿಸಲಾಗಿತ್ತು.
ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಗೆ ರೂ. 15 ಲಕ್ಷ ದಂಡ ವಿಧಿಸಲಾಗಿದೆ. ಇದು ಸನ್ ರೈಸರ್ಸ್ ಹೈದರಾಬಾದ್ ನ ಮೊದಲ ಅಪರಾಧವಾಗಿದೆ. ಹೆಚ್ಚುವರಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಎರಡೂ ತಂಡಗಳ ಇತರ ಆಟಗಾರರಿಗೆ ಪ್ರತ್ಯೇಕವಾಗಿ ರೂ. 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ. 25 ರಷ್ಟು ದಂಡ ವಿಧಿಸಲಾಗಿದೆ ಎಂದು IPL ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಆರ್ ಸಿಬಿಗೆ ಗೆಲ್ಲಲು 232 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆರ್ ಸಿಬಿ 189 ರನ್ ಗಳಿಗೆ ಆಲೌಟ್ ಆಗುವ ಮೂಲಕ 42 ರನ್ ಗಳಿಂದ ಸೋಲು ಕಂಡಿದೆ. ಇದು ಆರ್ ಸಿಬಿಗೆ ಈ ಬಾರಿಯ ನಾಲ್ಕನೇ ಸೋಲಾಗಿದೆ.
Advertisement